ಬಾಲಿವುಡ್ ನೆಗೆಯಲಿರುವ ಕನ್ನಡದ ಐಶ್ವರ್ಯ!
ಬೆಂಗಳೂರು, ಶುಕ್ರವಾರ, 8 ಫೆಬ್ರವರಿ 2008( 12:17 IST )
ಅರೆ! ಐಶ್ವರ್ಯಾ ರೈ ಬಾಲಿವುಡ್‌ನಲ್ಲೇ ಇದ್ದಾರಲ್ಲಾ? ಅಲ್ಲಿಯ ಪ್ರಮುಖ ಮನೆತನದ ಸೊಸೆಯೇ ಆಗಿದ್ದಾರಲ್ಲಾ? ಮತ್ತಿನ್ನೇನು ಹಾರುವುದು? ಅಂತ ಆಶ್ಚರ್ಯಪಡುತ್ತಿದ್ದೀರಾ? ವಿಷಯ ಅದಲ್ಲ. ಕನ್ನಡದ ಚಿತ್ರ ಐಶ್ವರ್ಯ ಸದ್ಯದಲ್ಲಿಯೇ ಹಿಂದಿಗೆ ಡಬ್ ಆಗಲಿದೆ.
ಒಂದು ಚಿತ್ರ ಅಥವಾ ಓರ್ವ ತಾರೆ ಯಶಸ್ವಿಯಾದರೆ ಏನೆಲ್ಲಾ ಸಾಧ್ಯತೆಗಳು ಹುಟ್ಟಿಕೊಳ್ಳುತ್ತವೆ ಎಂಬುದಕ್ಕೆ ನಟಿ ದೀಪಿಕಾ ಪಡುಕೋಣೆಯೇ ಸಾಕ್ಷಿ. ಈಕೆ ಕನ್ನಡದ ಐಶ್ವರ್ಯ ಚಿತ್ರದಲ್ಲಿ ಪ್ರಥಮ ಬಾರಿಗೆ ಕ್ಯಾಮೆರಾ ಎದುರಿಸುವಾಗ ಬಾಲಿವುಡ್‌ನಲ್ಲಿ ಇವರ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ಐಶ್ವರ್ಯ ಚಿತ್ರದ ನಂತರ ಶಾರೂಖ್ ಅಭಿನಯದ ಓಂ ಶಾಂತಿ ಓಂ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದೇ ತಡ ದೀಪಿಕಾಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಚಿತ್ರವೊಂದಕ್ಕೆ ಈಗ ಆಕೆ ಒಂದು ಕೋಟಿ ರೂ. ಡಿಮ್ಯಾಂಡ್ ಮಾಡುತ್ತಾರೆ ಎಂದು ಸುದ್ದಿ.
ದೀಪಿಕಾರ ಯಶಸ್ಸನ್ನು ಪತ್ರಕರ್ತ ಹಾಗೂ ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಎನ್‌ಕ್ಯಾಶ್ ಮಾಡಿಕೊಳ್ಳಲು ಹೊರಟಿದ್ದಾರೆ. ಕನ್ನಡದ ಐಶ್ವರ್ಯ ಚಿತ್ರವನ್ನು ಹಿಂದಿಗೆ ಡಬ್ ಮಾಡಿದರೆ ಈಗಾಗಲೇ ಬಾಲಿವುಡ್‌ನಲ್ಲಿ ತಳವೂರುತ್ತಿರುವ ತಮ್ಮ ಪ್ರಯತ್ನಕ್ಕೂ ಇಂಬು ಸಿಕ್ಕೀತು ಎಂಬ ಲೆಕ್ಕಾಚಾರ ಅವರದು. ಯಾರಿಗೆ ಗೊತ್ತು. ಇಂದ್ರಜಿತ್ ಜೊತೆಗೆ ಐಶ್ವರ್ಯ ಚಿತ್ರದ ನಾಯಕ ಉಪೇಂದ್ರರಿಗೂ ಬಾಲಿವುಡ್‌ನಲ್ಲಿ ಛಾನ್ಸ್ ಸಿಕ್ಕಿದರೂ ಸಿಕ್ಕಬಹುದು.