ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಓವರ್ ಕಾನ್ಪಿಡೆನ್ಸಿನಲ್ಲೇ ತೇಲಿದ ರತ್ನಜ-ಪ್ರೇಮ್
ಸುದ್ದಿ/ಗಾಸಿಪ್
Feedback Print Bookmark and Share
 
ಭಾರೀ ನಿರೀಕ್ಷೆ ಹುಟ್ಟಿಸಿದ್ದ ಪ್ರೇಮ್ ನಿರ್ದೇಶನ ಮತ್ತು ನಟನೆಯ ಪ್ರೀತಿ ಏಕೆ ಭೂಮಿ ಮೇಲಿದೆ ಹಾಗೂ ರತ್ನಜ ನಿರ್ದೇಶನದ ಹೊಂಗನಸು ಚಿತ್ರಗಳು ಬಿಡುಗಡೆಯಾಗಿ ಚಿತ್ರಮಂದಿರಕ್ಕೆ ತಲುಪಿದ ಬಳಿಕ ಠುಸ್ಸಾಗಿ ಪಾಚೊಂಡಿವೆ.

ಸೋಲು-ಗೆಲುವುಗಳು ಯಾವುದೇ ಕ್ಷೇತ್ರದಲ್ಲಿ ಸಹಜವೇ ಆದರೂ ಸೋತ ಸಂದರ್ಭದಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳುವುದು ಅಗತ್ಯ. ಏಕೆಂದರೆ ಸೋತವನಿಗೆ ಮಾತ್ರವೇ ಗೆಲ್ಲುವ ಛಾತಿಯಿರುತ್ತದೆ.

ಒಂದು ಚಿತ್ರಕ್ಕೆ ಸ್ಟಫ್ ಎಷ್ಟರಮಟ್ಟಿಗೆ ಇರಬೇಕು, ಪ್ರಚಾರದ ಅಗತ್ಯವಿದೆಯೇ, ಗಿಮಿಕ್ ವರ್ಕ್‌ಔಟ್ ಆಗುತ್ತದೆಯೇ ಎಂದು ಅರಿಯದೇ ಎಡವಿದ್ದು ಪ್ರೇಮ್ ಅವರ ಅತಿಯಾದ ಆತ್ಮವಿಶ್ವಾಸವನ್ನು ತೋರಿಸುತ್ತದೆ. ತಮ್ಮ ಉತ್ಪನ್ನವನ್ನು ಮಾರಾಟ ಮಾಡಲೂ ಈ ಮೇಲೆ ಹೆಸರಿಸಿದ ಎಲ್ಲವೂ ಇರಬೇಕು ಎಂಬುದು ವ್ಯಾವಹಾರಿಕ ಸತ್ಯ.

ಆದರೆ, ಏನೂ ಇಲ್ಲದೆ ಇವಿಷ್ಟರಿಂದಲೇ ಚಿತ್ರವನ್ನು ಗೆಲ್ಲಿಸುವುದು ಕಷ್ಟ ಎಂಬುದು ಅವರೀಗೀಗ ಅರ್ಥವಾಗಿರಬೇಕು. ಅತಿ ಹೆಚ್ಚು ಪ್ರಚಾರ ಮಾಡಿ ಕರೆತಂದ ಮಲ್ಲಿಕಾ ಶೆರಾವತ್ ಮಾಡಿಸಿದ ನೃತ್ಯದಿಂದಲೂ ಪ್ರೇಮ್ ಮತ್ತು ಅಶ್ವಿನಿ ರಾಮ್‌ಪ್ರಸಾದ್ ಅವರಿಗೆ ಏನೂ ಉಪಯೋಗವಾಗಿಲ್ಲ. ಏಕೆಂದರೆ ಒಂದು ಸಾಮಾನ್ಯ ಐಟಂ ಸಾಂಗ್ ಮಟ್ಟಕ್ಕೂ ಏರದ ಅಥವಾ ಒಂದು ಪಕ್ಕಾ ಕೀಟಲೆಯ ಗೀತೆಯೂ ಆಗದ ಈ ಹಾಡನ್ನು ನೋಡಿದಾಗ ಪ್ರೇಮ್ ಒಂದೋ ಗೊಂದಲದಲ್ಲಿದ್ದರು ಇಲ್ಲವೇ ಅವಸರದಲ್ಲಿದ್ದರು ಎನಿಸುತ್ತದೆ.

ಅವರ ಈ ಹಿಂದಿನ ಎಸ್ಕ್ಯೂಸ್ ಮಿ ಚಿತ್ರವನ್ನು ನೋಡಿದಾಗ (ಅದರಲ್ಲಿ ಸಾಜನ್, ನಮ್ಮೂರ ಮಂದಾರ ಹೂವೇ ಚಿತ್ರಗಳ ಛಾಯೆಯಿದ್ದರೂ) ಅದರಲ್ಲಿ ಚಿತ್ರವನ್ನು ಕಟ್ಟುವ ಕುರಿತಾದ ಪ್ರಾಮಾಣಿಕತೆಯಾದರೂ ಇತ್ತು. ಪ್ರೀತಿ ಏಕೆ.. ಚಿತ್ರದಲ್ಲಿ ಅವೆಲ್ಲಾ ಮಾಯವಾಗಿದೆ. ಇದರೊಂದಿಗೆ ಅವರು ನಾಯಕ ಪಾತ್ರದಲ್ಲಿ ಕಾಣಿಸಿಕೊಂಡಿರುವುದೂ ಮತ್ತೊಂದು ಮೈನಸ್ ಪಾಯಿಂಟ್. ಇವೆಲ್ಲಕ್ಕೆ ಪುಟವಿಟ್ಟಂತೆ ಚಿತ್ರ ತೀರಾ ತಡವಾಗಿ ಬಿಡುಗಡೆಯಾಯಿತು, ಅದೃಷ್ಟವೂ ಕೈಕೊಟ್ಟಿತು. ಇವುಗಳೆಲ್ಲದರ ಒಟ್ಟುಮೊತ್ತ ಚಿತ್ರದ ಸೋಲು.

ಇನ್ನು ಹೊಂಗನಸು ಚಿತ್ರ. ಪ್ರತಿಭಾವಂತನಾದವನಿಗೆ ಕೊಂಚವಾದರೂ ಅಹಂ ಇರಬೇಕೆನ್ನುವುದು ಬಲ್ಲವರ ಮಾತು. ಆದರೆ ಇದು ಅಸಹ್ಯ ಪಟ್ಟುಕೊಳ್ಳುವಷ್ಟರ ಮಟ್ಟಿಗೆ ಹೋದರೆ ಅದೇ ಮುಳುವಾಗುತ್ತದೆ ಎಂಬುದು ಪ್ರಾಯಶಃ ರತ್ನಜರ ವಿಷಯದಲ್ಲಿ ನಿಜ ಎನಿಸುತ್ತದೆ. ನೆನಪಿರಲಿ ಚಿತ್ರ ಸೂಪರ್‌ಹಿಟ್ ಆಗಿ, ಫಿಲಂಫೇರ್ ಪ್ರಶಸ್ತಿಯನ್ನು ಬಾಚಿಕೊಂಡಾಕ್ಷಣ ಕಿಂಗ್‌ಮೇಕರ್ ಎಂಬ ಭ್ರಮೆಯ ಪಂಜರದಲ್ಲಿ ತಮ್ಮನ್ನು ಸ್ವತಃ ಬಂದಿಯಾಗಿಸಿಕೊಂಡರು ರತ್ನಜ. ಇನ್ನೊಂದೆರಡು ಚಿತ್ರವಾಗುವವರೆಗಾದರೂ ಅವರು ತಾಳ್ಮೆಯಿಟ್ಟುಕೊಳ್ಳಬೇಕಿತ್ತು. ಚಿತ್ರ ವಿಮರ್ಶೆಯನ್ನು ನೋಡದೆ ಚಿತ್ರಕ್ಕೆ ಬನ್ನಿ ಎಂದು ವಾಹಿನಿಗಳ ಮೂಲಕ ಹೇಳುವಾಗಲಂತೂ ಅವರು ಹುಂಬತನವನ್ನು ಪ್ರದರ್ಶಿಸುತ್ತಿದ್ದಾರೆ ಅಂತಲೇ ಅನಿಸುತ್ತಿತ್ತು. ಆದರೆ ಕೊನೆಗೆ ಎದ್ದು ಕಂಡಿದ್ದು ವೈಫಲ್ಯವೇ. ಇದು ಪಾಠ ಕಲಿಯಲು, ಆತ್ಮವಿಮರ್ಶೆ ಮಾಡಿಕೊಳ್ಳಲು ಸೂಕ್ತ ಕಾಲ ಎಂದು ಪ್ರೇಕ್ಷಕರೇ ರತ್ನಜರಿಗೆ ಹೇಳಿದಂತಿತ್ತು.

ಒಂದು ಚಿತ್ರ ಅದನ್ನು ಸೃಷ್ಟಿಸಿದವನ ದೃಷ್ಟಿಯಲ್ಲಿ ಮಾಸ್ಟರ್‌ಪೀಸ್ ಕೃತಿಯೇ ಅಗಿರಬಹುದು. ಆದರೆ ಅದರ ನಿಜವಾದ ವಿಮರ್ಶಕ ಪ್ರೇಕ್ಷಕ ಎಂಬುದನ್ನು ಚಿತ್ರೋದ್ಯಮದವರು ಮರೆಯಬಾರದು. ಆತನಿಗೆ ಹದಿನಾರಾಣೆ ಮನರಂಜನೆ ಸಿಗದಿದ್ದರೆ ಅಥವಾ ಪೈಸಾ ವಸೂಲ್ ಎಂಬ ಭಾವ ಆತನಲ್ಲಿ ಮೂಡದಿದ್ದರೆ ನಿಮ್ಮ ಯಾವ ಗಿಮಿಕ್ಕುಗಳು, ಪ್ರಚಾರಗಳೂ ಅವನನ್ನು ಸೆಳೆಯಲಾರವು ಎಂಬುದನ್ನು ಅವರು ಅರಿತರೆ ಒಳ್ಳೆಯದು.

ಏಕೆಂದರೆ ಕೆಲವರನ್ನು ಕೆಲವು ಕಾಲ ಮೋಸ ಮಾಡಬಹುದು. ಆದರೆ ಹಲವರನ್ನು ಹಲವು ಕಾಲದವರೆಗೂ ಮೋಸ ಮಾಡಲು ಸಾಧ್ಯವಿಲ್ಲ. ಏಕೆಂದರೆ ದುಡ್ಡಿನ ದೊರೆಯಾದ ಪ್ರೇಕ್ಷಕ ಈಗ ಜಾಣನಾಗಿದ್ದಾನೆ..!!