ದೊಡ್ಡವರಿಗೆ ಮಾತ್ರ ಸಿಗ್ತಾಳಂತೆ ಶಿವಾನಿ
ಬೆಂಗಳೂರು, ಸೋಮವಾರ, 11 ಫೆಬ್ರವರಿ 2008( 11:50 IST )
ಆದರ್ಶ ಫಿಲಂ ಇನ್ಸ್‌ಟ್ಯೂಟ್‌ನಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ವಿಶಾಲ್‌ರಾಜ್ ಎಲ್ಲರಿಗೂ ಗೊತ್ತು. ಕಾಮಿಡಿ ಟೈಂ ಗಣೇಶ್ ಅವರೂ ಸೇರಿದಂತೆ ಹಲವು ನಟರು ಇವರ ಕೈನಲ್ಲಿ ಪಳಗಿದವರೇ. ವಿಶಾಲ್‌ರಾಜ್ ನಿರ್ದೇಶಿಸಿರುವ ಶಿವಾನಿ ಚಿತ್ರಕ್ಕೆ ಎ ಪ್ರಮಾಣಪತ್ರ ಸಿಕ್ಕಿದೆ ಎಂಬುದರೊಂದಿಗೆ ಸುದ್ದಿಗೆ ಹೊಸ ಚಾಲನೆ ಸಿಕ್ಕಿದೆ.
ಇದಕ್ಕೂ ಮುಂಚೆ ಬಹು ನೀರೀಕ್ಷಿತ ಪ್ರೇಮಕಥಾನಕವಾದ ಮನಸುಗಳ ಮಾತು ಮಧುರ ಚಿತ್ರಕ್ಕೂ ಎ ಪ್ರಮಾಣಪತ್ರ ಲಭಿಸಿದೆ ಎಂಬ ವಿಷಯ ಕೇಳಿ ಎಲ್ಲರಿಗೂ ಅಚ್ಚರಿಯಾಗಿತ್ತು. ಈಗ ಶಿವನಿಯ ಸರದಿ. ಚಿತ್ರದಲ್ಲಿ ಅಂತಹ ಅಂಶಗಳಿದ್ದರೆ ಸೆನ್ಸಾರ್ ಮಂಡಳಿಯವರು ತಾನೇ ಏನು ಮಾಡಲಾಗುತ್ತದೆ ಎಂಬುದು ಕೆಲವರ ಪ್ರಶ್ನೆ. ಆದರೆ ಸೆನ್ಸಾರ್ ಆಗಿ ಬಂದ ಮೇಲೂ ಕೆಲವೊಂದು ಅಸಹ್ಯಕರ ದೃಶ್ಯಗಳಿರುತ್ತವಲ್ಲಾ, ಇದಕ್ಕೇನು ಹೇಳುತ್ತೀರಿ? ಎಂಬುದು ಇನ್ನು ಕೆಲವರ ಪ್ರಶ್ನೆ.
ಒಟ್ಟಿನಲ್ಲಿ ಶಿವಾನಿಗೆ ಈ ತಿಂಗಳ 22ರಂದು ಬಿಡುಗಡೆಯ ಭಾಗ್ಯ ದೊರೆಯಲಿದೆ. ಚಿತ್ರದ ಕಥೆ-ಚಿತ್ರಕಥೆ-ನಿರ್ದೇಶನ ವಿಶಾಲ್‌ರಾಜ್ ಅವರದ್ದೇ. ಸಂಗೀತ ಮತ್ತು ಸಂಕಲನ ಜೇಮ್ಸ್ ಅವರದ್ದು. ನೆ.ಲ.ಗಿರಿಧರ್ ಮತ್ತು ಕೆ.ಎಸ್.ಶಿವಶಂಕರ್ ಚಿತ್ರದ ನಿರ್ಮಾಪಕರು. ಸೂರಜ್, ಶಿವಾನಿ, ಅನಿಲ್ ಮೊದಲಾದವರು ತಾರಾಗಣದಲ್ಲಿದ್ದಾರೆ ಎನ್ನುತ್ತದೆ ಚಿತ್ರತಂಡ.