ಮನೆತನವಾಯ್ತು; ಈಗ ಮಹಾಯಾನ
ಬೆಂಗಳೂರು, ಸೋಮವಾರ, 11 ಫೆಬ್ರವರಿ 2008( 11:50 IST )
ಚಂದನ ವಾಹಿನಿಯಲ್ಲಿ ಮನೆತನ ಎಂಬ ಮೆಗಾ ಧಾರಾವಾಹಿ ಪ್ರಸಾರಗೊಂಡು ಜನಪ್ರಿಯವಾಗಿದ್ದು ನಿಮಗೆ ನೆನಪಿರಬಹುದು. ಗುರುದತ್ ನಿರ್ದೇಶನದಲ್ಲಿ ಈ ಧಾರಾವಾಹಿ ಹೊರಬಂದಿತ್ತು. ಸುವರ್ಣ ವಾಹಿನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದು ಇತ್ತೀಚೆಗಷ್ಟೇ ತೀರಿಕೊಂಡ ಶಾಮ್ಸುಂದರ್ ಕೂಡಾ ಈ ಧಾರಾವಾಹಿಗೆ ದುಡಿದಿದ್ದರು. ಮನೆತನ ಧಾರಾವಾಹಿಯನ್ನು ನೆನಪಿಸಲೋ ಎಂಬಂತೆ ಕಸ್ತೂರಿ ವಾಹಿನಿಯಲ್ಲಿ ಸದ್ಯದಲ್ಲಿಯೇ ಮಹಾಯಾನ ಎಂಬ ಮೆಗಾ ಧಾರಾವಾಹಿ ಪ್ರಸಾರವಾಗಲಿದೆ.
ಎಪ್ಪತ್ತರ ದಶಕದಲ್ಲಿ ಹುಲಿ ಬಂತು ಹುಲಿ ಎಂಬ ಚಿತ್ರ ನಿರ್ದೇಶಿಸಿ ಖ್ಯಾತರಾಗಿದ್ದ ಸಿ.ಚಂದ್ರಶೇಖರ್ ಈ ಧಾರಾವಾಹಿಯ ಮೂಲಕ ಮತ್ತೊಮ್ಮೆ ಲೈಮ್‌ಲೈಟ್‌ಗೆ ಬರುತ್ತಿದ್ದಾರೆ. ಈ ಚಿತ್ರದ ನಂತರ ಹಲವು ಚಿತ್ರಗಳನ್ನು ಚಂದ್ರಶೇಖರ್ ನಿರ್ದೇಶಿಸಿದ್ದರೂ ಅವು ಯಶಸ್ಸು ಕಂಡಿರಲಿಲ್ಲ. ನಂತರ ಅವರು ಸೇರಿದ್ದು ಹಿಂದಿ ಚಿತ್ರ ನಿರ್ದೇಶಕ ಮನ್‌ಮೋಹನ್ ದೇಸಾಯಿಯವರ ತಂಡವನ್ನು. ಅವರ ಜೊತೆ 8 ವರ್ಷ ದುಡಿದ ನಂತರ ಕನ್ನಡ ಚಿತ್ರರಂಗಕ್ಕೆ ಮರಳಿದರು ಚಂದ್ರಶೇಖರ್. ಆದರೆ ಅಷ್ಟುಹೊತ್ತಿಗಾಗಲೇ ಕಾವೇರಿಯಲ್ಲಿ ಸಾಕಷ್ಟು ನೀರು ಹರಿದಿತ್ತು, ಚಿತ್ರರಂಗದವರ ಆಶಯಗಳು ಬದಲಾಗಿದ್ದವು. ಆಗ ಅವರು ಕಂಡುಕೊಂಡಿದ್ದೇ ಟಿ.ವಿ.ಧಾರಾವಾಹಿಗಳನ್ನು.
ಅಂದು ಇಂದು, ಮಲೆಗಳಲ್ಲಿ ಮದುಮಗಳು, ಸಂಕ್ರಾಂತಿ, ಮಹಾಚೈತ್ರ ಇವೇ ಮೊದಲಾದ ಧಾರಾವಾಹಿಗಳಲ್ಲಿ ದುಡಿದ ಚಂದ್ರಶೇಖರ್ ಈಗ ಕೈಗೆತ್ತಿಕೊಂಡಿರುವುದು ಮಹಾಯಾನ. ಇದಕ್ಕೆ ಜೆ.ಎಂ.ಪ್ರಹ್ಲಾದ್, ಎಂ.ಎನ್.ವ್ಯಾಸರಾವ್, ಕೇಶವರೆಡ್ಡಿ ಹಂದ್ರಾಳ್ ಒಟ್ಟಾಗಿ ಸಂಭಾಷಣೆಯನ್ನು ಬರೆದಿದ್ದಾರೆ. ಪದ್ಮಾವಾಸಂತಿ, ಚಂದ್ರಕಲಾಮೋಹನ್, ಹಂಸವಿಜೇತ ಮೊದಲಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ.
ಮಹಾಯಾನ ಮಹಾನ್ ಯಶಸ್ಸು ಕಾಣಲಿ ಎಂಬುದು ನಮ್ಮ ಹಾರೈಕೆ.