ಏಕೆ ಹೀಗೆ ನಮ್ಮ ನಡುವೆಗೆ ಸುವರ್ಣ ಸಂಭ್ರಮ
ಬೆಂಗಳೂರು, ಸೋಮವಾರ, 11 ಫೆಬ್ರವರಿ 2008( 11:51 IST )
ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗುವ ಏಕೆ ಹೀಗೆ ನಮ್ಮ ನಡುವೆ ಧಾರಾವಾಹಿಗೆ ಈಗ 50ರ ಕಂತು ದಾಟಿದ ಸಂಭ್ರಮ. ಇದನ್ನು ಹಂಚಿಕೊಳ್ಳಲೆಂದೇ ಧಾರಾವಾಹಿಯ ತಂಡ ಪತ್ರಿಕಾ ಗೋಷ್ಠಿಯೊಂದನ್ನು ಆಯೋಜಿಸಿತ್ತು.
ಸಾಹಿತ್ಯಿಕ ಮೌಲ್ಯ ತುಂಬಿದ್ದ ಈ ಧಾರಾವಾಹಿಯನ್ನು ಜನ ಮೆಚ್ಚುತ್ತಾರಾ ಇಲ್ಲವಾ ಎಂಬ ಭಯ ನಿರ್ದೇಶಕ ರಮೇಶ್ ಬೇಗಾರ್‌ರವರಿಗೆ ಕಾಡಿತ್ತಂತೆ. ಆದರೆ ದಿನದಿಂದ ದಿನಕ್ಕೆ ಜನ ಮೆಚ್ಚುಗೆಯನ್ನು ತೋರಿಸಿಕೊಟ್ಟಿದ್ದಾರೆ ಎಂಬುದು ಅವರಿಗೆ ಸಮಾಧಾನ ತಂದಿದೆಯಂತೆ.
ಸಾಮಾನ್ಯವಾಗಿ ಧಾರಾವಾಹಿಗಳ ಚಿತ್ರೀಕರಣ ಬೆಂಗಳೂರನ್ನು ಬಿಟ್ಟು ಆಚೆ ಹೋಗುವುದಿಲ್ಲ. ಆದರೆ ಈ ಧಾರಾವಾಹಿಗಾಗಿ ಶೃಂಗೇರಿಯ ಮಲೆನಾಡಿನ ರಮ್ಯತಾಣದಲ್ಲಿ ಚಿತ್ರೀಕರಣ ನಡೆಸಿರುವುದು ಒಂದು ಹೆಗ್ಗಳಿಕೆ. ಪಶ್ಚಿಮಘಟ್ಟ ಶ್ರೇಣಿಯ ಪ್ರದೇಶದಲ್ಲಿನ ಜನ ಮಾತಾಡುವ ಶೈಲಿಯ ಕನ್ನಡವನ್ನೇ ಈ ಧಾರಾವಾಹಿಯಲ್ಲೂ ಬಳಸಿರುವುದು ಹಾಗೂ ಸ್ಥಳೀಯ ರಂಗ ಕಲಾವಿದರನ್ನು ಬಳಸಿಕೊಂಡಿರುವುದು ಇಲ್ಲಿನ ವಿಶೇಷ.
ಧಾರಾವಾಹಿಯ ಮುಂದಿನ ಕಂತುಗಳಲ್ಲಿ ಯಕ್ಷಗಾನವನ್ನು ಬಳಸಿಕೊಳ್ಳುವುದಲ್ಲದೇ ರೋಚಕ ತಿರುವುಗಳನ್ನೂ ಒದಗಿಸಲಾಗುವುದು ಎಂಬುದು ನಿರ್ದೇಶಕರ ಹೇಳಿಕೆ. ಧಾರಾವಾಹಿ ಅವರ ಹೇಳಿಕೆಯಷ್ಟೇ ರೋಚಕವಾಗಿರಲಿ ಎಂಬುದು ನಮ್ಮ ಬಯಕೆ ಮತ್ತು ಹಾರೈಕೆ.