ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಮೊಮ್ಮಗ ಅವಿನಾಶ್ ಇದೀಗ ಜುಗಾರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ. ಇವರನ್ನು ಚಿತ್ರರಂಗಕ್ಕ ಕರೆತಂದಿದ್ದು, ರಂಗಕರ್ಮಿ, ಜಾಹೀರಾತು ಸಿನಿಮಾಗಳಲ್ಲಿ ನಿರ್ದೇಶನ ಮಾಡಿರುವ ಅರವಿಂದ್.
ಇಲ್ಲಿ ಹೀರೋಯಿಸಂಗೆ ಅವಕಾಶವೇ ಇಲ್ಲ. ಪೋಷಕ ಪಾತ್ರಗಳು ನಾಯಕನ ಪಾತ್ರದಷ್ಟೇ ಪ್ರಾಮುಖ್ಯತೆ ಪಡೆದುಕೊಂಡಿದೆ. ದೊಡ್ಡ ಬ್ಯುಸಿನೆಸ್‌ಮನ್ ನಗರಕ್ಕೆ ಬಂದು ಇಲ್ಲಿ ಭ್ರಷ್ಟ ಅಧಿಕಾರಿಗಳೊಂದಿಗೆ ಕೈ ಜೋಡಿಸುತ್ತಾನೆ. ತಾನು ಮಾಡುತ್ತಿರುವುದು ಜನರಿಗಾಗಿ ಎಂದು ಕೊನೆಯಲ್ಲಿ ಗೊತ್ತಾಗುವುದೇ ಚಿತ್ರದ ಸ್ಟೋರಿ ಎನ್ನುತ್ತಾರೆ ಅರವಿಂದ್. ಮುಖ್ಯವಾಗಿ ಆಕ್ಷನ್ ಇಲ್ಲದಿರುವುದೇ ಚಿತ್ರದ ವಿಶೇಷ. ಇಂದಿನ ಜನ ಸಾಮಾನ್ಯರಿಗೆ ಈ ಸಿನಿಮಾ ಇಷ್ಟವಾಗುವುದರಲ್ಲಿ ಸಂಶಯವಿಲ್ಲ ಎಂಬುದು ಅವರ ಅಭಿಪ್ರಾಯ.
ಇವರ ಮಾತಿಗೆ ಧ್ವನಿಗೂಡಿಸಿದವರು ನಾಯಕ ಅವಿನಾಶ್. ಕನ್ನಡ ಚಿತ್ರರಂಗದಲ್ಲಿ ನರಸಿಂಹರಾಜು ಅವರ ಹೆಸರನ್ನು ಉಳಿಸುವ ಪ್ರಯತ್ನ ಮಾಡುತ್ತೇನೆ ಎನ್ನುತ್ತಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಪ್ರಾರಂಭಗೊಂಡಿದೆ. ಚಿತ್ರಕ್ಕೆ ಬಿರುಗಾಳಿ ಖ್ಯಾತಿಯ ಅರ್ಜುನ್ ಅವರ ಸಂಗೀತವಿದೆ.