ಕಿರುತೆರೆ ನಿರೂಪಕಿ, ನಟಿಯರು ಸಿನಿಮಾ ನಾಯಕಿಯರಾಗುವುದು ಹಳೆಯ ಸುದ್ದಿ. ಆದರೆ ನಟಿ ಅಶ್ವಿನಿ ನೇರವಾಗಿ ಬೆಳ್ಳಿತೆರೆಗೆ ಪರಿಚಯವಾದರು. ಅವರ ಪ್ರಕಾರ ಸಿನಿಮಾಗಳಲ್ಲಿ ನಟಿಸಿದರೂ ಹೆಸರು ಸಿಕ್ಕಿದ್ದು ಕಿರುತೆರೆಯಲ್ಲೇ ಎನ್ನುವುದು ಅವರ ಅಭಿಪ್ರಾಯ.
ಅದಕ್ಕೆ ಕಾರಣ ಇಲ್ಲದಿಲ್ಲ. ಅವರು ನಟಿಸಿದ್ದ ಮೂರನೇ ಕ್ಲಾಸ್ ಮಂಜ ಬಿಕಾಂ ಭಾಗ್ಯ ಬಾಕ್ಸ್ ಆಫೀಸಿನಲ್ಲಿ ಮುಗ್ಗರಿಸಿತು. ಈ ಮೊದಲು ಖಾಸಗಿ ವಾಹಿನಿಗಳಲ್ಲಿ ಬರುತ್ತಿದ್ದ ನೃತ್ಯ ರಿಯಾಲಿಟಿ ಷೋಗಳಲ್ಲಿ ಅಶ್ವಿನಿ ಸ್ಪಧಿಯಾಗಿ ಪಾಲ್ಗೊಂಡಿದ್ದರು. ಕೆಲವು ಹಂತದವರೆಗೆ ಪೈಪೋಟಿ ನೀಡಿದ್ದ ಅವರು ಅಂತಿಮವಾಗಿ ಸ್ಪರ್ಧೆಯಿಂದ ಹೊರ ಬಂದಿದ್ದರು. ಆದರೆ ಅದರ ಬಗ್ಗೆ ಅವರಿಗೆ ಬೇಸರವಿಲ್ಲ. ಸೋಲು ಗೆಲುವಿಗಿಂತ ಪಾಲ್ಗೊಳ್ಳುವಿಕೆಯೇ ಮುಖ್ಯ ಎಂಬುದು ಅವರ ಅನಿಸಿಕೆ.
ಈಗ ಬಿ.ಸಿ. ಪಾಟೀಲ್ ನಟನೆ, ನಿರ್ದೇಶನದ ಸೆಲ್ಯೂಟ್ ಚಿತ್ರದ ಬಗ್ಗೆ ನೀರೀಕ್ಷೆಯಿಟ್ಟಿದ್ದಾರೆ. ಚಿತ್ರೀಕರಣದಲ್ಲಿರುವ ಹೇ ಸರಸೂ... ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಅಶ್ವಿನಿ ನಿರ್ದೇಶಕಿಯಾಗಬೇಕೆಂದು ಸಿನಿಮಾಗೆ ಬಂದವರು. ಇದೀಗ ನಟಿಯಾಗಿ ತಮ್ಮ ಬದುಕು ರೂಪುಗೊಳ್ಳುತ್ತಿರುವ ಬಗ್ಗೆ ಅವರಿಗೆ ಸಂತಸವಿದೆ.