ಕನ್ನಡ ಸಿನಿಮಾಗಳ ಮಟ್ಟಿಗೆ ಒಂದು ಶುಭ ಸುದ್ದಿಯಿದೆ. ಮನರಂಜನಾ ಖಾಸಗಿ ಟಿವಿ ಚಾನಲ್‌ಗಳ ಸಂಖ್ಯೆ ಕನ್ನಡದಲ್ಲಿ ಏರುತ್ತಲೇ ಇರುವುದರಿಂದ ಇತ್ತೀಚೆಗೆ ಕನ್ನಡ ಸಿನಿಮಾಗಳು ಥಿಯೇಟರ್‌ನಲ್ಲಿ ಅಷ್ಟಾಗಿ ಓಡದಿದ್ದರೂ ಬಲು ಬೇಗನೆ ಚಿತ್ರದ ಹಕ್ಕುಗಳು ಮಾತ್ರ ಚಾನಲ್‌ಗಳು ಭಾರೀ ಬೆಲೆಗೆ ಖರೀದಿ ಮಾಡುತ್ತಿವೆ. ಚಾನಲ್‌ಗಳ ನಡುವೆ ಹೆಚ್ಚಿರುವ ಸ್ಪರ್ಧೆಯೂ ಇದಕ್ಕೆ ಮುಖ್ಯ ಕಾರಣ.
ಮೊನ್ನೆ ಮೊನ್ನೆ ಬಿಡುಗಡೆಯಾದ ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಸಿನಿಮಾ ಪ್ರಸಾರದ ಹಕ್ಕು ಈಗಾಗಲೇ ಟಿವಿ ವಾಹಿನಿಯೊಂದಕ್ಕೆ 68 ಲಕ್ಷ ರೂಪಾಯಿಗಳಿಗೆ ಮಾರಾಟವಾಗಿದೆಯಂತೆ! ಗಣೇಶ್ ಮೊದಲ ಬಾರಿಗೆ ನಿರ್ಮಿಸುತ್ತಿರುವ ಮಳೆಯಲಿ ಜೊತೆಯಲಿ ಚಿತ್ರದ ಪ್ರಸಾರ ಹಕ್ಕು ಬಿಡುಗಡೆಗೆ ಮೊದಲೇ 1.79 ಕೋಟಿ ರೂಪಾಯಿಗಳಿಗೆ ಟಿವಿ ವಾಹಿನಿಯೊಂದಕ್ಕೆ ಮಾರಾಟವಾಗಿದೆ.
ಹೀಗಾಗಿ ನಿರ್ಮಾಪಕರು ನೆಮ್ಮದಿಯಿಂದ ಚಿತ್ರ ಮಾಡುತ್ತಿದ್ದಾರೆ. ನಿರ್ಮಾಪಕರು ಹಾಕಿದ ಬಂಡವಾಳದ ಮುಕ್ಕಾಲು ಪಾಲು ಅಥವಾ ಅದಕ್ಕಿಂತ ಹೆಚ್ಚು ಟಿವಿಗಳಿಗೆ ಪ್ರಸಾರದ ಹಕ್ಕುಗಳನ್ನು ಮಾರಿದ್ದರಿಂದಲೇ ಬರುತ್ತಿದೆ. ಅದರಲ್ಲೂ ಗಣೇಶ್, ಪುನೀತ್ ಸಿನಿಮಾಗಳೆಂದರೆ ಟಿವಿ ವಾಹಿನಿಗಳಲ್ಲಿ ಎಲ್ಲಿಲ್ಲದ ಬೇಡಿಕೆ. ಇವರ ಸಿನಿಮಾಗಳು ಒಂದುಕಾಲು ಕೋಟಿಗಿಂತ ಹೆಚ್ಚಿನ ಬೆಲೆ ಬಾಳುತ್ತದೆ ಎಂಬುದು ಸಿನಿಮಾ ಪಂಡಿತರ ಅಂಬೋಣ. ಈಗ ಸಿನಿಮಾ ಹಕ್ಕನ್ನು ಪಡೆದುಕೊಂಡ ಟಿವಿ ವಾಹಿನಿಗಳು ಚಿತ್ರ ನಿರ್ಮಾಣಕ್ಕೂ ಕೈ ಹಾಕಿದರೆ ತಪ್ಪಲ್ಲ.