ಪೂಜಾ ಗಾಂಧಿಗೆ ಋಣ ತೀರಿಸುವ ಸಮಯ ಬಂದಿದೆ ಅನಿಸುತ್ತೆ. ಅದಕ್ಕಾಗಿ ಅವರು ತವರು ಮನೆ ಕದ ತಟ್ಟಿದ್ದಾರೆ. ಈಗಾಗಲೇ ತವರಿಗೆ ಬಾ ತಂಗಿ, ತಾಯಿ ಇಲ್ಲದ ತವರು, ತವರಿನ ತೊಟ್ಟಿಲು, ತವರು ಮನೆ ಉಡುಗೊರೆ ಮೊದಲಾದ ಚಿತ್ರಗಳಲ್ಲಿ ಶ್ರುತಿ, ಸಿತಾರಾ, ರಾಧಿಕಾ ಮುಂತಾದವರು ಬಂದು ಹೋಗಿದ್ದಾರೆ.
ಇದೀಗ ತವರಿನ ಋಣ ಚಿತ್ರದ ಮೂಲಕ ಪೂಜಾ ಗಾಂಧಿ ಎರಡನೇ ಇನ್ನಿಂಗ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆ. ಶ್ರೀರಾಂ ರೆಡ್ಡಿ ಮತ್ತು ಎಂ ಎನ್. ವರದರಾಜು ನಿರ್ಮಿಸಲಿರುವ ಈ ಚಿತ್ರ ಮುಂದಿನ ತಿಂಗಳ 24ರಿಂದ ಚಿತ್ರೀಕರಣ ಪ್ರಾರಂಭಗೊಳ್ಳಲಿದೆ. ಚಿತ್ರಕ್ಕೆ ರಮೇಶ್ ರಾಜ್ ನಿರ್ದೇಶಕರು. ಈ ಮೊದಲು ಗ್ಯಾಂಗ್ ಲೀಡರ್ ಚಿತ್ರದ ಮೂಲಕ ನಿರ್ದೇಶಕರಾಗಿದ್ದರು.
ಚಿತ್ರದ ಹೆಸರೇ ಹೇಳುವಂತೆ ಇದೊಂದು ಪಕ್ಕಾ ಫ್ಯಾಮಿಲಿ ಸೆಂಟಿಮೆಂಟ್ ಸಿನಿಮಾ. ಅಲ್ಲದೆ, ಇದು ನಾಯಕಿ ಪ್ರಧಾನ ಚಿತ್ರ. ನಾಯಕನಾಗಿ ತೆಲುಗಿನ ನಟ ಪರಮೇಶ್ ನಟಿಸುತ್ತಿದ್ದಾರೆ. ಉಳಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿ ಕಾಣಿಸಲಿದ್ದಾರೆ ಎನ್ನುತ್ತಾರೆ ರಮೇಶ್ ರಾಜ್. ಸಕಲೇಶಪುರ, ತೀರ್ಥಹಳ್ಳಿ ಮೊದಲಾದೆಡೆ ಚಿತ್ರೀಕರಣ ನಡೆಯಲಿದೆ.
ಅಂದ ಹಾಗೆ ಕಳೆದ ಜನವರಿಯಿಂದ ಪೂಜಾ ಗಾಂಧಿ ನಟಿಸಿದ ಅನು ಚಿತ್ರ ಬಿಟ್ಟರೆ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ನಿನಗಾಗಿ ಕಾದಿರುವೆ, ಇನಿಯ ಬಿಡುಗಡೆಯ ಸನಿಹದಲ್ಲಿದೆ. ಅತ್ತ ಹುಚ್ಚಿಯ ಚಿತ್ರೀಕರಣವೂ ಮುಗಿದಿದೆ. ಗೋಕುಲಕ್ಕೆ ಎಂಟ್ರಿಯಾಗಿದ್ದಾರೆ. ಅದರ ನಡುವೆ ತಂಗಿ ರಾಧಿಕಾ ಜೊತೆ ಹರಿಕಥೆ ಹೇಳಲು ಒಪ್ಪಿಕೊಂಡಿದ್ದಾರೆ. (ಪೂಜಾ ಗಾಂಧಿಯ ಮೋಹಕ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ)