ಹಿಂದಿಗೆ ಮುಂಗಾರು ಮಳೆ
ಸಂಗೀತ ಸುಧೆಯಿಂದ ಹಾಗೂ ಜೋಗದ ಧಾರೆಯಿಂದ ಕನ್ನಡದ ಬೆಳ್ಳಿ ತೆರೆಯನ್ನೇ ತೋಯಿಸಿದ ಮುಂಗಾರು ಮಳೆ ಇದೀಗ ಹಿಂದಿಗೆ ರಿಮೇಕ್ ಆಗಲಿದೆ. ಬೋನಿ ಕಪೂರ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಚಿತ್ರ ರಿಮೇಕ್ ಆಗಲಿದೆ. ಮುಂಗಾರು ಮಳೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ನಿರ್ದೇಶಕ ದಯಾಳ್ ಚಿತ್ರದ ಹಕ್ಕುಗಳನ್ನು ಖರೀದಿಸಿದ್ದರು. ಬಳಿಕ ಬೋನಿಕಪೂರ್ ಪ್ರೊಡಕ್ಷನ್ಸ್‌ಗೆ ಮಾರಿದ್ದರು. ಇದೀಗ ಅವರ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಮೂಡಿ ಬರಲಿದೆ. ಈಗಾಗಲೇ ಚಿತ್ರದ ಕೆಲಸ ಪ್ರಾರಂಭಿಸಿದ್ದೇವೆ. ನಿದೇಶನದ ಜವಾಬ್ದಾರಿಯನ್ನು ಸಂತೋಷ್ ಶಿವನ್ ನಿರ್ವಹಿಸಲಿದ್ದಾರೆ ಎನ್ನುತ್ತಾರೆ ಬೋನಿಕಪೂರ್ ಪ್ರೊಡಕ್ಷನ್‌ನ ಕಾರ್ಯನಿರ್ವಾಹಕ ನಿರ್ಮಾಪಕ ಶ್ಯಾಮಸುಂದರ್.ಬೋನಿಕಪೂರ್ ಸ್ವತಃ ಈ ಚಿತ್ರ ವೀಕ್ಷಿಸಿದ್ದು, ತುಂಬ ಇಷ್ಟಪಟ್ಟಿದ್ದಾರೆ. ಈ ಚಿತ್ರ ಸಾರ್ವಕಾಲಿಕ ಅಪೀಲನ್ನು ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜತೆಗೆ ಅಂದೇ ಇದನ್ನು ಹಿಂದಿ ತರಬಹುದು ಎಂದಿದ್ದರು. ಕಳೆದ ಮೂರು ನಾಲ್ಕು ತಿಂಗಳಲ್ಲಿ ಈ ಚಿತ್ರದ ಬಗ್ಗೆ ಕೆಲಸ ಆರಂಭಿಸಿದ್ದೇವೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ ಎಂದು ಶ್ಯಾಮಸುಂದರ್ ವಿವರಿಸಿದರು.ಮುಂಗಾರು ಮಳೆಯಲ್ಲಿ ನಾಯಕಿ ಕೊಡಗಿನವಳು. ಕೊಡವ ಸಮುದಾಯದ ಸಂಪ್ರದಾಯವೂ ಚಿತ್ರದಲ್ಲಿದೆ. ಆದರೆ ಹಿಂದಿ ಭಾಷಿಗರಿಗೆ ಹೆಚ್ಚು ಆಪ್ತವಾಗಿಸಲು ಹಿಂದಿ ಚಿತ್ರದಲ್ಲಿ ಕೊಡವ ಸಂಪ್ರದಾಯದ ಬದಲಾಗಿ ಪಂಜಾಬಿ ಸಂಸ್ಕೃತಿಯನ್ನು ಚಿತ್ರಿಸಲಾಗುತ್ತದೆ. ಹಿಂದಿ ಚಿತ್ರದಲ್ಲಿ ನಾಯಕಿ ಪಂಜಾಬಿಯಾಗುತ್ತಾಳೆ ಎಂದು ವಿವರಿಸಿದರು ಶ್ಯಾಮಸುಂದರ್.ಚಿತ್ರಕ್ಕೆ ನಾಯಕನನ್ನು ಇನ್ನೂ ಆಯ್ಕೆ ಮಾಡಿಲ್ಲ. ಇಮ್ರಾನ್ ಖಾನ್ ಸೂಕ್ತನಾಗುತ್ತಾನೆ ಎಂದು ಭಾವಿಸಿದ್ದೇವೆ. ಅಥವಾ ರಣಬೀರ್ ಕಪೂರ್‌ಗೂ ಈ ಪಾತ್ರ ಸೂಟ್ ಆಗಬಹುದು ಎಂದು ಲೆಕ್ಕಾಚಾರ ಹಾಕಿದ್ದೇವೆ ಎನ್ನುವ ಶ್ಯಾಮಸುಂದರ್, ಹೊಸಬರನ್ನೂ ಆಯ್ಕೆ ಮಾಡುವ ಯೋಚನೆಯಿದೆ. ಕನ್ನಡದಲ್ಲಿ ಗಣೇಶ್ ಹೊಸಬರೇ ಆಗಿದ್ದರು. ಈ ಬಗ್ಗೆ ಇನ್ನೆರಡು ತಿಂಗಳಲ್ಲಿ ನಿರ್ಧಾರವಾಗಲಿದೆ ಎನ್ನುತ್ತಾರೆ ಅವರು.ಮುಂಗಾರು ಮಳೆ ಚಿತ್ರದ ಹಾಡುಗಳೂ ಕನ್ನಡದಲ್ಲಿ ಭರ್ಜರಿ ಯಶಸ್ಸು ಕಂಡಿದ್ದವು. ಚಿತ್ರ ಬಿಡುಗಡೆಯಗಿ 400 ದಿನಗಳ ಕಾಲ ಎಡೆಬಿಡದ ಪ್ರದರ್ಶನ ಕಂಡಿತ್ತು. ಅಷ್ಟೇ ಅಲ್ಲ 75 ಕೋಟಿ ರೂಪಾಯಿಗಳನ್ನು ಗಳಿಸಿದ ಈ ಚಿತ್ರ ಪಿವಿಆರ್ ಮಲ್ಟಿಪ್ಲೆಕ್ಸ್‌ನಲ್ಲಿ ಸತತ ಒಂದು ವರ್ಷ ಕಾಲ ಹೌಸ್‌ಫುಲ್ ಪ್ರದರ್ಶನ ಕಂಡ ಏಕೈಕ ಸ್ಥಳೀಯ ಭಾಷಾ ಚಿತ್ರವಾಗಿ ರಾಷ್ಟ್ರೀಯ ದಾಖಲೆ ಕೂಡಾ ನಿರ್ಮಿಸಿತು. ನಟಿ ಗಣೇಶ್ ಕನ್ನಡದಲ್ಲಿ ಮಿಂಚಿದ್ದೇ ಮುಂಗಾರು ಮಳೆಯಿಂದ. ನಿರ್ದೇಶಕ ಯೋಗರಾಜ್ ಭಟ್ ಹಾಗೂ ಗೀತರಚನೆಕಾರ ಜಯಂತ್ ಕಾಯ್ಕಿಣಿಗೆ ಚಿತ್ರರಂಗದಲ್ಲೊಂದು ಮೈಲಿಗಲ್ಲೇ ಇದು ನೀಡಿತು. ಇಂತಹ ಮುಂಗಾರು ಮಳೆ ಹಿಂದಿಯಲ್ಲಿಯೂ ಸುರಿಯಲಿ.