ಸೆಲ್ಯೂಟ್ ಚಿತ್ರಕ್ಕೆ ಸೆನ್ಸಾರ್ ಮಂಡಳಿ ತಕಾರಾರು ಮಾಡಿದೆ. ಸೆನ್ಸಾರ್ ಮಂಡಳಿಗೆ ಆಯ್ಕೆಯಾಗಿರುವ ನಾಗರಾಜ್, ತಾವು ನೋಡಿದ ಮೊದಲ ಚಿತ್ರ ಸೆಲ್ಯೂಟ್‌ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸೆಲ್ಯೂಟ್ ನಿರ್ದೇಶಕ ಬಿ.ಸಿ.ಪಾಟಿಲ್ ಈಗ ಸ್ವಲ್ಪ ನಿಜವಾಗಿಯೂ 'ಬಿಸಿ'ಯಾಗಿದ್ದಾರಂತೆ.
ಇದಕ್ಕೆ ಎನ್ಕೌಂಟರ್ ಕಾರಣವಂತೆ. ಚಿತ್ರದಲ್ಲಿ ಎನ್ಕೌಂಟರ್ ದೃಶ್ಯಗಳನ್ನು ವೈಭವೀಕರಿಸಲಾಗಿದೆ ಎಂಬ ಕಾರಣಕ್ಕೆ ಅದನ್ನು ಸ್ವಲ್ಪ ಕಡಿಮೆ ಮಾಡುವುದಕ್ಕೆ ಹೇಳಿದ್ದರಂತೆ. ಇದನ್ನು ಪಾಟೀಲ್ ಅಲ್ಲೆಗೆಳೆದಿದ್ದಾರೆ. ಪಾಟೀಲರು ಈಗ ರಿವೈಸಿಂಗ್ ಕಮಿಟಿಗೆ ಹೋಗುವುದಕ್ಕೆ ನಿರ್ಧರಿಸಿದ್ದಾರೆ.
ನಾವು ವಿನಾಕಾರಣ ಎನ್ಕೌಂಟರ್ ದೃಶ್ಯಗಳನ್ನೇನೂ ಹೆಚ್ಚಿಸಿಲ್ಲ. ಆ ಮೂಲಕ ಕ್ರಿಮನಲ್ ಚಟುವಟಿಕೆಗಳನ್ನೇನೂ ಪ್ರಚೋದಿಸಿಲ್ಲ. ನಾನೂ ಒಬ್ಬ ಪೊಲೀಸ್ ಅಧಿಕಾರಿಯಾಗಿದ್ದವನು. ನನಗೆ ಎಷ್ಟು ತೋರಿಸಬೇಕೆಂಬುದು ನನಗೆ ತಿಳಿದಿದೆ ಎನ್ನುತ್ತಾರೆ ಪಾಟೀಲ್. ಅಂತೂ ಸೆನ್ಸಾರ್ ಮಂಡಳಿ ವಿರುದ್ಧ ಸಮರಕ್ಕೆ ಸಿದ್ಧವಾಗಿದ್ದಾರೆ ಪಾಟೀಲ್. ಸಧ್ಯಕ್ಕೆ ನಾಗರಾಜ್ ಪ್ರತಿಕ್ರಿಯೆ ಸಿಕ್ಕಿಲ್ಲ. ಬಹುಶಃ ಅವರು ಇನ್ನೊಂದು ಚಿತ್ರದ ವೀಕ್ಷಣೆಯಲ್ಲಿ ಬ್ಯುಸಿಯಾಗಿರಬೇಕು.