ಅಂತೂ ನಿರ್ದೇಶಕ ಪ್ರೇಮ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತೀವ್ರ ಕುತೂಹಲ ಮೂಡಿಸಿರುವ ರಾಜ್ ದಿ ಶೋಮ್ಯಾನ್ ಚಿತ್ರೀಕರಣ ಕೊನೆಗೂ ಮುಕ್ತಾಯಗೊಂಡಿದೆ. ಇದೀಗ ಚಿತ್ರತಂಡದೊಂದಿಗೆ ನಿರ್ದೇಶಕ ಪ್ರೇಮ್ ಗಾಂಧಿನಗರಕ್ಕೆ ಬಂದಿದ್ದಾರೆ.
ಕೊನೆಯ ಹಂತದ ಚಿತ್ರೀಕರಣದಲ್ಲಿ ಚಿತ್ರತಂಡ ಅನುಭವಿಸಿದ ಕ್ಲಿಷ್ಟಕರ ಸನ್ನಿವೇಶಗಳನ್ನು ಬಿಚ್ಚಿಟ್ಟರು ಪ್ರೇಮ್. ಯಾವುದೇ ರೀತಿಯಲ್ಲಿ ಸಿದ್ಧರಾಗದೆ ಚಿತ್ರೀಕರಣ ನಡೆಸಿದ್ದರಿಂದ ಸಮಸ್ಯೆ ಎದುರಾಯಿತು. ಮೌಂಟ್ ಎವರೆಸ್ಟ್‌ಗಿಂತ 100 ಅಡಿ ಕೆಳಗಿದ್ದೆವು ಅಷ್ಟೇ. ಹಾಡಿನ ಒಂದು ಭಾಗವನ್ನು ಚಿತ್ರೀಕರಿಸಿದೆವು. ಮುಂದಿನ ಭಾಗ ಚಿತ್ರೀಕರಿಸುವ ಸಂದರ್ಭದಲ್ಲಿ ಒಬ್ಬೊಬ್ಬರಾಗಿಯೇ ಪ್ರಜ್ಞೆ ತಪ್ಪಿ ಬೀಳಲು ಶುರುವಾಯಿತು. ಆದರೆ ಅದೃಷ್ಟವಶಾತ್ ಪುನೀತ್ ರಾಜ್‌ಕುಮಾರ್‌ಗೆ ಯಾವುದೇ ಅಪಾಯವಾಗಿಲ್ಲ. ಚೆನ್ನಾಗಿ ಅಭಿನಯಿಸಿದ್ದಾರೆ ಎಂದರು ಪ್ರೇಮ್.
ಚಿತ್ರದ ಸನ್ನಿವೇಶಗಳು ಹಿಂದಿಯ ಕಭಿ ಖುಷಿ ಕಭಿ ಗಮ್ ಚಿತ್ರಕ್ಕಿಂತಲೂ ಸುಂದರವಾಗಿ ಲಡಾಖನ್ನು ಸೆರೆಹಿಡಿದಿದ್ದೇವೆ. ಚಿತ್ರತಂಡದ ಸಹಕಾರದಿಂದ ಚಿತ್ರೀಕರಣ ನಡೆಸುವುದು ಸಾಧ್ಯವಾಯಿತು ಎಂದ ಅವರು, ಚಿತ್ರ ಬಿಡುಗಡೆ ಬಗ್ಗೆ ಮಾತ್ರ ತುಟಿಪಿಟಿಕ್ಕೆಂದಿಲ್ಲ.