ಚಿತ್ರರಂಗಕ್ಕೆ ಬರುವ ನಾಯಕಿಯರಲ್ಲಿ ಕೆಲವರು ಮೊದಮೊದಲು ನೋ ಎಂದರೂ ಮತ್ತೆ ಅನಿವಾರ್ಯತೆಯಿಂದಲೋ, ಸ್ಪರ್ಧೆಯಿಂದಲೂ ಎಂತಹ ಪಾತ್ರಕ್ಕೂ ಸೈ ಎನ್ನುತ್ತಾರೆ. ಕೆಲವರು ಚಿತ್ರರಂಗಕ್ಕೆ ಎಂಟ್ರಿ ಕೊಡೋವಾಗ್ಲೇ ಎಲ್ಲದಕ್ಕೂ ತಯಾರಾಗೇ ಬಂದಿರುತ್ತಾರೆ. ಆದ್ರೆ ಗೌರಿ ಎಂಬ ಸುಂದರಿ ಮಾತ್ರ ತಾನು ಬಿಚ್ಚೋಲೆ ಗೌರಮ್ಮ ಆಗಲು ಸುತಾರಾಂ ಒಪ್ಪಲ್ಲ ಅಂತಿದ್ದಾರೆ.
ಎಕ್ಸ್ಪೋಸ್ ಅನ್ನೋ ಪದ ಬಂದ್ರೆ ಸಾಕು ಮಾರುದ್ದ ಸಿಡುಕುವ ಈ ಸುಂದರಿ ಗೌರಿ ಮುಂಜಾಲ್ ಮುಂದೆ ತನಗೆ ಎಕ್ಸ್ಪೋಸ್ ಪಾತ್ರ ಸಿಕ್ಕರೆ ದೂರದಿಂದಲೇ ದೊಡ್ಡ ಸಾಷ್ಟಾಂಗ ನಮಸ್ಕಾರ ಹಾಕ್ತೇನೆ. ಅಂಥವುಗಳ ಉಸಾಬರಿ ನನಗೆ ಬೇಡಪ್ಪಾ ಎಂದು ದೊಡ್ಡ ಮಾತನ್ನೇ ಹೇಳುತ್ತಾಳೆ ಈ ಗೌರಿ.
ಪುನೀತ್ ರಾಜ್ಕುಮಾರ್ ಅಭಿನಯದ ನಮ್ಮ ಬಸವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ಗೌರಿ, ಸ್ವಲ್ಪ ದಿನ ಕನ್ನಡ ಚಿತ್ರರಂಗದಿಂದ ದೂರವೇ ಉಳಿದರು. ನಂತರ ಮುರಳಿ ಜೊತೆ ಗೋಪಿ, ಜಾಜಿ ಮಲ್ಲಿಗೆ ಇವರಿಗೆ ಗೆಲುವಿನ ಸೋಪಾನವೇನೂ ನೀಡಿಲ್ಲ.
ಈಗ ಸದ್ಯ ಗೌರಿ ಹೋರಿ ಮೇಲೆ ಸವಾರಿ ಮಾಡುತ್ತಿದ್ದಾರೆ. ಹೋರಿ ಚಿತ್ರದ ನಾಯಕ ವಿನೋದ್ ಪ್ರಭಾಕರ್. ನಾಯಕಿ ಗೌರಿ. ಅಂದ ಹಾಗೆ ಈಕೆ ಸದಾ ಬ್ಯುಸಿಯಾಗಿರುವುದಕ್ಕೆ ಇಷ್ಟಪಡುತ್ತಾಳೆ. ಒಂದು ಚಿತ್ರೀಕರಣ ನಡೆಯುತ್ತಿರುವಾಗಲೇ ಮತ್ತೊಂದು ಚಿತ್ರದಲ್ಲಿ ನಟಿಸುವುದಕ್ಕೆ ಸೈ ಎನ್ನುತ್ತಾಳೆ ಈ ಗೌರಿ. ಕನ್ನಡದಲ್ಲಿ ನೆಲೆಯೂರಬೇಕೆಂದು ಕನಸು ಕಾಣುತ್ತಿರುವ ದೆಹಲಿ ಹುಡುಗಿಗೆ ಒಳ್ಳೆ ಅವಕಾಶ ಸಿಗಲಿ.