ಗುಳಿಕೆನ್ನೆಯ ಸುಂದರ ದಿಗಂತ್ ಹಾಗೂ ಇ ಪ್ರೀತಿ ನಿರ್ದೇಶಕಿ ಪ್ರಿಯ ಭಾರತಿ ನಡುವಣ ಹಗ್ಗಜಗ್ಗಾಟ ದಿನೇದಿನೇ ತಾರಕಕ್ಕೇರುತ್ತಿದೆ. ಪ್ರಿಯ ಭಾರತಿ ತನ್ನ ವಿರುದ್ಧ ಹೇಳಿದ್ದೆಲ್ಲವೂ ಸುಳ್ಳು ಎಂದು ದಿಗಂತ್ ವಾದಿಸುತ್ತಿದ್ದರೆ, ಅತ್ತ ಚಿತ್ರದ ನಿರ್ಮಾಪಕ ನಾರಾಯಣ ಹೊಸ್ಮನೆ ಕೂಡಾ ಪ್ರಿಯ ಭಾರತಿ, ದಿಗಂತ್ ಬಳಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ, ಪ್ರಿಯ ಭಾರತಿ ಮಾತ್ರ ತಾನು ಹೇಳಿದ್ದೆಲ್ಲವೂ ಸತ್ಯ. ಅದು ಸುಳ್ಳೆಂದು ಪ್ರಮಾಣೀಕರಿಸಿದರೆ ಖಂಡಿತ ಕ್ಷಮೆ ಕೇಳುತ್ತೇನೆ ಎಂದು ಸಡ್ಡು ಹೊಡೆದಿದ್ದಾರೆ.
ಆಗಿದ್ದು ಇಷ್ಟೇ. ಇತ್ತೀಚೆಗೆ ಇ ಪ್ರೀತಿಯ ಶೂಟಿಂಗ್ ಸಮಯದಲ್ಲಿ ದಿಗಂತ್‌ರ ಚರಿತ್ರೆಯನ್ನೆಲ್ಲ ಕೆದಕಿ ನಿರ್ದೇಶಕಿ ಪ್ರಿಯ ಭಾರತಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇಮೇಲ್ ದೂರನ್ನು ನೀಡಿದ್ದರು. ದೂರಿನಲ್ಲಿ, ವಾಷಿಂಗ್ಟನ್‌ನಲ್ಲಿ ನಡೆದ ಇ ಪ್ರೀತಿ ಶೂಟಿಂಗ್ ಸಂದರ್ಭ ತನ್ನ ಮನೆಯಲ್ಲಿ ಆಲ್ಕೋಹಾಲ್ ಬಾಟಲಿಗಳನ್ನೆಲ್ಲ ತಂದು ದಿಗಂತ್ ಎಲ್ಲೆಲ್ಲಿಯೋ ಅಡಗಿಸಿಟ್ಟುಕೊಳ್ಳುತ್ತಿದ್ದರು. ಅಲ್ಲದೆ ನಾಯಕಿ ನಟಿಯರೊಂದಿಗೆ ದಿಗಂತ್ ಹಾಸಿಗೆ ಹಂಚಿದ್ದಾರೆ. ಜತೆಗೆ ತನ್ನ ಕ್ರೆಡಿಟ್ ಕಾರ್ಡನ್ನು ಬಳಸಿ ಸಾಕಷ್ಟು ಖರೀದಿ ಮಾಡಿದ್ದು ನನ್ನ ಹಣವನ್ನು ದುರುಪಯೋಗ ಮಾಡಿದ್ದಾರೆ ಎಂದೆಲ್ಲ ಹಲವು ವಿಷಯಗಳನ್ನು ಸೇರಿಸಿ ದಿಗಂತ್ ವಿರುದ್ಧ ಮಾರುದ್ದದ ಇಮೇಲ್ ದೂರನ್ನು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು ಇ ಪ್ರೀತಿ ನಿರ್ದೇಶಕಿ ಪ್ರಿಯ ಭಾರತಿ.
ಅಲ್ಲದೆ, ದಿಗಂತ್ ಇ ಪ್ರೀತಿಗೆ ಸಹಿ ಹಾಕಿದಂದಿನಿಂದ ಇಲ್ಲಿವರೆಗೆ ಎಲ್ಲ ಕಥೆ ಪುರಾಣವನ್ನೂ ವಾಣಿಜ್ಯ ಮಂಡಳಿಯೊಂದಿಗೆ ಅಳಲು ತೋಡಿಕೊಂಡಿದ್ದರು ಪ್ರಿಯ. ದಿಗಂತ್ ಇ ಪ್ರೀತಿ ಚಿತ್ರದಲ್ಲಿ ನಟಿಸಲು ಡೇಟ್ಸ್ ಹೊಂದಿಕೆಯಾಗುತ್ತಿಲ್ಲ ಎಂದು ಸಹಿ ಮಾಡಿದ ನಂತರ ತಗಾದೆ ತೆಗೆದಿದ್ದರು. ದಿಗಂತ್‌ರಿಂದಾಗಿ ಫೆಬ್ರವರಿಯಲ್ಲಿ ವಾಷಿಂಗ್ಟನ್‌ನಲ್ಲಿ ಎರಡು ವಾರಗಳ ಕಾಲ ನಡೆಯಬೇಕಿದ್ದ ಶೂಟಿಂಗ್ ಕೂಡಾ ರದ್ದಾಯಿತು. ಇದರಿಂದ ವಿಮಾನ ಟಿಕೆಟ್‌ಗಳನ್ನೂ ರದ್ದು ಮಾಡಿ ಸಾಕಷ್ಟು ತೊಂದರೆಯಾಗಿದೆ ಎಂದೂ ದೂರಿದ್ದರು ಪ್ರಿಯ.
MOKSHA
ಇಷ್ಟೇ ಅಲ್ಲದೆ ಇಮೇಲ್‌ನಲ್ಲಿ, ತಾನು ದಿಗಂತ್ ಅವರಿಗೆ ಔಷಧಿ ಖರೀದಿಸಲು ತನ್ನ ಕ್ರೆಡಿಟ್ ಕಾರ್ಡ್ ಕೊಟ್ಟಿದ್ದೆ. ಆದರೆ ಅವರು ನನ್ನ ಕ್ರೆಡಿಟ್ ಕಾರ್ಡ್ ಬಳಸಿ ನನ್ನ ಖಾಸಗಿ ಹಣವನ್ನು ನನ್ನ ಅನುಮತಿಯಿಲ್ಲದೆ ಶೂ ಖರೀದಿ ಮಾಡಿದ್ದಾರೆ. ಸುಮಾರು 100 ಡಾಲರ್‌ಗಿಂತಲೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ನನ್ನ ಕಾರ್ಡನ್ನು ಬಳಸಿ ನೈಟ್ ಕ್ಲಬ್‌ಗೂ ಹೋಗಿ ಪಾರ್ಟಿ ಮಾಡಿದ್ದಾರೆ. ಒಂದು ವರ್ಷಗಳಿಂದ ಮುಂದೂಡುತ್ತಲೇ ಬಂದಿರುವ ಈ ಪ್ರೀತಿ ಇನ್ನೂ ಚಿತ್ರೀಕರಣ ಪೂರ್ಣಗೊಂಡಿಲ್ಲ. ಈ ಮೊದಲೇ ಪ್ರಿಯ ಭಾರತಿ ದಿಗಂತ್ ನೀಡಿದ ಡೇಟ್ಸ್‌ಗೆ ಸರಿಯಾಗಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದೂ ದೂರಿಕೊಂಡಿದ್ದರು.
ಇಷ್ಟೆಲ್ಲ ದೂರುಗಳಿದ್ದರೂ, ದಿಗಂತ್ ಮಾತ್ರ ಎಲ್ಲವನ್ನೂ ಅಲ್ಲಗಳೆಯುತ್ತಾರೆ. ಪ್ರಿಯ ಹೇಳಿದ್ದೆಲ್ಲವೂ ಸುಳ್ಳು ಎಂದೂ ವಾದಿಸುತ್ತಾರೆ. ಆದರೆ ನಿಮ್ಮನ್ನೇ ಯಾಕೆ ಪ್ರಿಯಾ ಟಾರ್ಗೆಟ್ ಮಾಡಿದ್ದಾರೆ ಎಂದರೆ ದಿಗಂತ್, ಪ್ರಿಯ ಭಾರತಿ ನಿರ್ಮಾಪಕರು ಚಿತ್ರಕ್ಕಾಗಿ ನೀಡಿದ ಹಣವನ್ನು ದುರುಪಯೋಗ ಮಾಡಿದ್ದಾರೆ. ಆದರೆ ಈಗ ಪ್ರಿಯಾರಿಗೆ ಗಿಲ್ಟ್ ಕಾಡುತ್ತಿದೆ. ಈ ತೊಂದರೆಗಳಿಗೆ ಅವರಿಗೆ ನಿರ್ಮಾಪಕರನ್ನು ದೂಷಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ನನ್ನನ್ನು ಇಲ್ಲಿ ಬಕ್ರಾ ಮಾಡಲಾಗಿದೆ. ಪ್ರಿಯಾ ಹೇಳೋದೆಲ್ಲಾ ಬರೀ ರೀಲು. ಆಕೆಗೆ ಈಗ ಚಿತ್ರತಂಡದಲ್ಲಿ ಸಪೋರ್ಟ್ ಮಾಡುವವರು ಯಾರೂ ಇಲ್ಲ. ಅದಕ್ಕಾಗಿ ನನ್ನ ಮೇಲೆ ಸುಳ್ಳು ಆರೋಪ ಹೊರಿಸಿ ಪಾರಾಗಲು ನೋಡುತ್ತಿದ್ದಾರೆ ಎಂದು ಒಂದೇ ಉಸಿರಿನಲ್ಲಿ ಹೇಳುತ್ತಾರೆ ಡಿಂಪಲ್ ಸುಂದರ ದಿಗಂತ್.
ಹಾಗಾದರೆ ನಾಯಕಿಯರ ಜತೆಗೂ ಏನೋ ಸಂಬಂಧದ ಬಗ್ಗೆ ಕೇಳಿಬರುತ್ತಿದೆಯಲ್ಲ ಎಂದರೆ ದಿಗಂತ್, ಸಾಧ್ಯವೇ ಇಲ್ಲ. ನಾಯಕಿಯರಿಗೂ ನನಗೂ ಪ್ರತ್ಯೇಕ ಕೋಣೆಗಳಿದ್ದವು ಎಂದು ಉತ್ತರಿಸುತ್ತಾರೆ.
ಆಕೆಯ ಹಣವನ್ನು ದುರ್ಬಳಕೆ ಮಾಡಿದ ಆರೋಪವೂ ನಿಮ್ಮ ಮೇಲಿದೆಯಲ್ಲ ಎಂದರೆ, ಯಾರಾದರೂ ಅವರ ಕ್ರೆಡಿಟ್ ಕಾರ್ಡನ್ನು ಇನ್ನೊಬ್ಬರಿಗೆ ಬಳಸಲು ನೀಡುತ್ತಾರೋ ಎಂದು ಮರುಪ್ರಶ್ನೆ ಹಾಕುತ್ತಾರೆ.
ಜತೆಗೆ, ಆಕೆಗೆ ವಯಸ್ಸು 30 ದಾಟಿದೆ. ಆದರೂ ಅವರಿಗೆ ಪ್ರೌಢತೆ ಇಲ್ಲ. ನಿರ್ದೇಶನದ ಗಂಧಗಾಳಿಯೇ ಗೊತ್ತಿಲ್ಲ. ಚಿತ್ರ ನಿರ್ದೇಶನದಲ್ಲಿರುವ ತೊಂದರೆಯೆಲ್ಲ ನಿರ್ದೇಶಕರದೇ. ಮೂರು ಬಾರಿ ಕ್ಯಾಮರಾಮನ್‌ರನ್ನು ಬದಲಾಯಿಸಲಾಗಿದೆ. ಇಬ್ಬರು ಪ್ರೊಡಕ್ಷನ್ ಮ್ಯಾನೇಜರ್‌ಗಳನ್ನು ಬದಲಾಯಿಸಿದ್ದೇವೆ. ಸಿನಿಮಾವೆಂಬುದರ ಎಬಿಸಿಡಿಯೇ ಪ್ರಿಯಾರಿಗೆ ಗೊತ್ತಿಲ್ಲ ಎಂದು ದೂರುತ್ತಾರೆ ದಿಗಂತ್. ಆದರೂ ನಾನು ಸಹಿ ಮಾಡಿದಂತೆ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತೇನೆ. ನನ್ನ ಹಾಗೂ ನಿರ್ದೇಶಕರ ನಡುವೆ ಏನೇ ಜಗಳ ನಡೆದರೂ ಪರವಾಗಿಲ್ಲ. ನಿರ್ಮಾಪಕರಿಗೆ ಕೊಟ್ಟ ಮಾತನ್ನು ನಾನು ಉಳಿಸುತ್ತೇನೆ. ನಿರ್ಮಾಪಕರಿಗೆ ಗೊತ್ತಿದೆ ಪ್ರಿಯಾರದ್ದೇ ತಪ್ಪು ಅಂತ ಎಂದು ದಿಗಂತ್ ವಿವರಿಸುತ್ತಾರೆ.
ಆದರೆ, ಇತ್ತ ನಿರ್ದೇಶಕಿ ಪ್ರಿಯ ಮಾತ್ರ ದಿಗಂತ್ ವರಸೆಯನ್ನು ಒಪ್ಪಲು ಸಿದ್ಧರಿಲ್ಲ. ದಿಗಂತ್ ವಿರುದ್ಧ ನಾನು ಮಾಡಿರುವ ಆರೋಪಗಳಲ್ಲಿ ಸುಳ್ಳು ಇದ್ದರೆ ಖಂಡಿತಾ ಕ್ಷಮೆ ಕೇಳುತ್ತೇನೆ. ನಾನು ದೂರು ನೀಡಿದ್ದೆಲ್ಲವೂ ಸತ್ಯ ಎಂದು ಪಟ್ಟು ಹಿಡಿದಿದ್ದಾರೆ. ಜತೆಗೆ ದಿಗಂತ್ ವಿರುದ್ಧ ತಕ್ಷಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದೂ ವಾಣಿಜ್ಯ ಮಂಡಳಿಯನ್ನು ಒತ್ತಾಯಿಸಿದ್ದಾರೆ.
ಪ್ರಿಯಾಗೆ ನಿರ್ದೇಶನ ಬರುವುದಿಲ್ಲ ಎಂಬ ದಿಗಂತ್ ಮಾತಿಗೆ ಪ್ರತ್ಯುತ್ತರವಾಗಿ, ದಿಗಂತ್ ಮಾಡೆಲಿಂಗ್ ಪ್ರಪಂಚದಿಂದ ಬಂದವರು. ಅವರಿಗೆ ನಟನೆಯ ಗಂಧಗಾಳಿಯೇ ಗೊತ್ತಿಲ್ಲ. ಅವರಿಂದ ನಾಟಕ ಕಂಪನಿಯ ಕಲಾವಿದರು ಎಷ್ಟೋ ವಾಸಿ ಎಂದು ಪ್ರಿಯಾ ಮಾತಿನ ಛಾಟಿ ಬೀಸಿದ್ದಾರೆ.
ಪ್ರಿಯ ಭಾರತಿ ಕನ್ನಡ ಚಿತ್ರ ನಿರ್ದೇಶನಕ್ಕೆ ಹೊಸಬರೇನಲ್ಲ. ಈ ಹಿಂದೆ ಕೆಲವು ವರ್ಷಗಳ ಮೊದಲೇ ಗುಟ್ಟು ಎಂಬ ಚಿತ್ರ ನಿರ್ದೇಶಿಸಿದ್ದರು. ಮೂಲತಃ ಕನ್ನಡಿಗರಾದರೂ, ಅಮೆರಿಕದಲ್ಲೇ ನೆಲೆಸಿದ್ದಾರೆ. ಈಗ ಕನ್ನಡ ಚಿತ್ರರಂಗದಲ್ಲಿ ಮುಂಗಾರು ಮಳೆಯಿಂದ ಮಿಂಚಿದ ಗೋಲ್ಡನ್ ಸ್ಟಾರ್ ಗಣೇಶ್‌ರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದೂ ಪ್ರಿಯ ಭಾರತಿ ಅವರೇ. ಆದರ್ಶ ಫಿಲಂ ಸೊಸೈಟಿಯಿಂದ ನಟನೆ ಕಲಿತು ಆಗಷ್ಟೆ ಹೊರಬಂದಿದ್ದ ಗೋಲ್ಡನ್ ಸ್ಟಾರ್ ಗಣೇಶ್‌ರನ್ನು ಪ್ರಿಯ ತನ್ನ ಗುಟ್ಟು ಚಿತ್ರಕ್ಕೆ ನಾಯಕರನ್ನಾಗಿ ಆಯ್ಕೆ ಮಾಡಿದ್ದರು. ನಂತರ ಗಣೇಶ್‌ಗೆ ಚಿತ್ರರಂಗದಲ್ಲಿ ಅವಕಾಶ ಸಿಗದೆ ಕಿರುತೆರೆಯಲ್ಲಿ ಕೆಲಕಾಲ ದುಡಿದು ಮತ್ತೆ ಪೂರ್ಣಪ್ರಮಾಣದ ನಾಯಕನಾಗಿ ಬೆಳ್ಳಿತೆರೆಗೆ ಬಂದಿದ್ದು ಹಳೇ ಕಥೆ.
ಆದರೆ ಹೀಗೆ ಮಾತಿನಲ್ಲೇ ಯುದ್ಧ- ಪ್ರತಿಯುದ್ಧ ನಡೆಯುತ್ತಿರುವ ಈ ಹೊಸ 'ಇ ಪ್ರೀತಿ' ಕಥೆ ಎಲ್ಲಿಗೆ ತಲುಪುತ್ತೋ... ಕಾಯಬೇಕು.