ಹೋರಿ ಏರಲಿರುವ ಟೈಗರ್ ಪುತ್ರ
ಹುಲಿ ಹೊಟ್ಟೆಯಲ್ಲಿ ಹುಲಿಯೇ ಹುಟ್ಟುವುದು ಎಂಬುದನ್ನು ಸಾಬೀತು ಪಡಿಸಿದ್ದಾರೆ ಟೈಗರ್ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್. ಚಿತ್ರದ ಗೆಲುವಿಗಾಗಿ ಸಾಕಷ್ಟು ಬೆವರು ಸುರಿಸುತ್ತಿದ್ದು, ಡ್ಯೂಪನ್ನೂ ಬಳಸದೇ ಸಾಹಸ ದೃಶ್ಯಗಳಲ್ಲಿ ನಟಿಸಿದ್ದಾರಂತೆ.ಈಗಾಗಲೇ ನಾಲ್ಕೈದು ಚಿತ್ರಗಳಲ್ಲಿ ನಟಿಸಿ ಬಂದಿದ್ದಾರೆ. ಪ್ರತಿ ಸಿನಿಮಾವೂ ಗೆಲ್ಲಲೇಬೇಕೆಂಬ ಛಲದಿಂದ ಬೆವರು ಹರಿಸುತ್ತಿದ್ದಾರೆ. ಸರ್ಕಲ್ ರೌಡಿ ಚಿತ್ರ ಮಾಡುವಾಗ ಮೈ ತುಂಬಾ ಗಾಯ ಮಾಡಿಕೊಂಡಿದ್ದರು. ಒಂದು ಫೈಟಿನಲ್ಲಂತೂ ಬಲವಾಗಿ ಪೆಟ್ಟು ಮಾಡಿಕೊಂಡು, ತಿಂಗಳಾನುಗಟ್ಟಲೆ ನರಳಿದ್ದರು. ಆದರೆ ಇಷ್ಟು ಮಾಡಿಯೂ ಚಿತ್ರ ಗೆಲ್ಲಲಿಲ್ಲ ಎಂಬುದು ಇವರ ನೋವು. ಈಗ ಅದೇ ವಿನೋದ್ ಮತ್ತೆ ಗೆಲ್ಲಬೇಕು ಎಂದು ಪಣತೊಟ್ಟಿದ್ದಾರೆ. ಹಿಂದಿನ ಸೋಲಿಗೆ ಕಾರಣವೇನು ಎಂಬ ಪ್ರಶ್ನೆಗೆ ಅವರು ಕೊಡುವ ಉತ್ತರ ಇಷ್ಟೇ. ಸಿನಿಮಾ ನನ್ನ ಕನಸು. ಪ್ರತಿಯೊಂದು ದೃಶ್ಯವನ್ನು ಶ್ರದ್ದೆ ವಹಿಸಿ ಮಾಡುತ್ತೇನೆ. ಆದರೆ ಅದು ಬಿಡುಗಡೆಯಾದಾಗ ಅಲ್ಲಿ ಗೆಲ್ಲಲು ಬೇಕಾದ ಕೆಲವು ಅಂಶಗಳ ಕೊರತೆ ಎದ್ದುಕಾಣುತ್ತದೆ. ಅದು ನನ್ನ ತಪ್ಪಲ್ಲ ಎನ್ನುತ್ತಾರೆ.ವಿನೋದ್ ಸಧ್ಯ ಹೋರಿ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಇದು ಹಿಂದಿನ ಎಲ್ಲಾ ಚಿತ್ರಗಳಿಗಿಂತ ಭಿನ್ನವಾಗಿದೆ. ಇದನ್ನು ಮಾಗಡಿ ಪಾಂಡು ನಿರ್ದೇಶಿಸುತ್ತಿದ್ದಾರೆ. ಡ್ಯೂಪ್ ಸಹಾಯವಿಲ್ಲದೆ ಫೈಟ್ ಮಾಡಿದ್ದಾರೆ. ಹೋರಿ ಚಿತ್ರಕ್ಕೆ ಪ್ರೇಕ್ಷಕರು ಏನ್ನನ್ನುತ್ತಾರೋ ಕಾದು ನೋಡಬೇಕು.