ಚಾರ್ಲಿ ಚಾಪ್ಲಿನ್ ಪ್ರತಿಮೆ ವಿವಾದದಿಂದಾಗಿ ಭಾರೀ ಪ್ರಚಾರ ಪಡೆದ ಹೌಸ್‌ಫುಲ್ ಚಿತ್ರ ಮುಂದಿನ ವಾರ ಚಾರ್ಲಿ ಚಾಪ್ಲಿನ್ ಪ್ರತಿಮೆಯೇ ಇಲ್ಲದೆ ಬಿಡುಗಡೆಗೊಳ್ಳಲಿದೆ. ವಿಚಿತ್ರವೆಂದರೆ 67 ಅಡಿ ಎತ್ತರದ ಬೃಹತ್ ಚಾಪ್ಲಿನ್ ಪ್ರತಿಮೆ ನಿರ್ಮಿಸಿ ಅದರ ಹಿನ್ನೆಲೆಯಿರುವ ಹಾಡಿನ ದೃಶ್ಯಗಳನ್ನು ಚಿತ್ರದಲ್ಲಿ ಬಳಸಲು ಉದ್ದೇಶಿಸಿದ್ದ ಹೇಮಂತ್ ಹೆಗಡೆ ಈಗ ಕೇವಲ ಏಳು ಅಡಿ ಎತ್ತರದ ಚಾಪ್ಲಿನ್ ಪ್ರತಿಮೆಯನ್ನು ಫಿಲಂ ಸಿಟಿಯಲ್ಲಿ ಅನಾವರಣಗೊಳಿಸಿದ್ದಾರೆ.
ಚಿತ್ರ ಬಿಡುಗಡೆ ವಿಷಯದ ಕುರಿತು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೇಮಂತ್ ಹೆಗಡೆ, ಬೈಂದೂರು ಸಮೀಪದ ಒತ್ತಿನೆಣೆ ಕಡಲ ತೀರದಲ್ಲಿ ಸೋಮೇಶ್ವರ ದೇವಸ್ಥಾನದ ಬಳಿ ಚಾರ್ಲಿ ಚಾಪ್ಲಿನ್ ಪ್ರತಿಮೆ ನಿರ್ಮಿಸಿ ಅದನ್ನು ಹಾಡಿನ ದೃಶ್ಯಕ್ಕೆ ಬಳಸಬೇಕೆಂದುಕೊಂಡಿದ್ದೆ. ಆದರೆ, ಭಾರೀ ಪ್ರತಿಭಟನೆಗಳು ನನ್ನ ನಿರ್ಧಾರವನ್ನು ಬದಲಾಯಿಸಿದವು. ಹಾಗಾಗಿ ಚಾರ್ಲಿ ಚಾಪ್ಲಿನ್ ಇಲ್ಲದೇ ಹಾಡಿಗೆ ಮರು ಚಿತ್ರೀಕರಣ ಮಾಡಲಾಯಿತು. ಯಾಕೆಂದರೆ ಚಿತ್ರವನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸುವ ಜವಾಬ್ದಾರಿ ನನ್ನ ತಲೆ ಮೇಲಿತ್ತು ಎಂದು ವಿವರಿಸಿದರು.
ಈಗ ಏಳು ಅಡಿ ಎತ್ತರದ 1.5 ಲಕ್ಷ ರುಪಾಯಿ ವೆಚ್ಚದಲ್ಲಿ ಚಾಪ್ಲಿನ್ ಪ್ರತಿಮೆಯನ್ನು ನಿರ್ಮಿಸಿ ಅದನ್ನು ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಅನಾವರಣ ಮಾಡಲಾಗಿದೆ. ಚಿತ್ರಕ್ಕಾಗಿ ನಿರ್ಮಿಸಲು ಬಯಸಿದ್ದ 62 ಅಡಿ ಎತ್ತರದ 30 ಲಕ್ಷ ರೂಪಾಯಿ ವೆಚ್ಚದ ಇನ್ನೊಂದು ಚಾಪ್ಲಿನ್ ಪ್ರತಿಮೆಯೂ ತಯಾರಿ ಹಂತದಲ್ಲಿದ್ದು ಅದನ್ನೂ ಫಿಲಂ ಸಿಟಿಯಲ್ಲೇ ಅನಾವರಣಗೊಳಿಸಲಾಗುತ್ತದೆ ಎಂದು ಹೇಮಂತ್ ಹೆಗಡೆ ತಿಳಿಸಿದರು.
ಚಾಪ್ಲಿನ್ ಪ್ರತಿಮೆಯ ವಿವಾದವೇ ಚಿತ್ರದ ಪ್ಲಸ್ ಪಾಯಿಂಟ್ ಎಂಬುದನ್ನು ಸ್ವತಃ ಒಪ್ಪಿಕೊಂಡ ಹೇಮಂತ್ ಹೆಗಡೆ, ಚಿತ್ರ 50 ದಿನಗಳ ಕಾಲ ಎಡೆಬಿಡದ ಪ್ರದರ್ಶನ ಕಂಡರೆ ಖಂಡಿತವಾಗಿಯೂ ಮತ್ತೆ ಹಾಡನ್ನು ಮರು ಚಿತ್ರೀಕರಣ ಮಾಡುತ್ತೇನೆ ಎಂದು ತಿಳಿಸಿದರು.
MOKSHA
ಚಾಪ್ಲಿನ್ ಪ್ರತಿಮೆಯನ್ನು ಚೇತನ್ ಮುಂಡಾಡಿ ಹಾಗೂ ಸಂತೋಷ್ ಮಾರತ್‌ಹಳ್ಳಿ ನಿರ್ಮಿಸಿದ್ದಾರೆ. ನಿರ್ಮಾಣದ ಜವಾಬ್ದಾರಿಯನ್ನು ಉದ್ಯಮಿ ರಾಜೇಶ್ ಮೆಹ್ರಾ ವಹಿಸಿದ್ದಾರೆಂದು ಹೆಗಡೆ ತಿಳಿಸಿದರು.
ಚಾಪ್ಲಿನ್ ಪ್ರತಿಮೆ ಫಿಲಂ ಸಿಟಿಯ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಲಿದೆ. ಹಾಗೂ ಅದೊಂದು ನಮ್ಮ ಸಂಸ್ಕೃತಿಯ ಭಾಗವೆಂದು ನಾನು ಅಂದುಕೊಳ್ಳುತ್ತೇನೆಂದು ಹೇಮಂತ್ ಹೆಗಡೆ ತಿಳಿಸಿದರು.
ಕೆಲ ತಿಂಗಳ ಹಿಂದೆ ರಾಜ್ಯದಲ್ಲಿ ಚರ್ಚ್ ದಾಳಿಯ ವಿವಾದ ಮುಗಿಯುತ್ತಿದ್ದಂತೆ ಎದ್ದ ಇನ್ನೊಂದು ವಿವಾದ ಹೌಸ್‌ಫುಲ್ ಚಿತ್ರಕ್ಕಾಗಿ ಒತ್ತಿನೆಣೆಯಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಬಾರೀ ಚಾಪ್ಲಿನ್ ಪ್ರತಿಮೆ. 67 ಅಡಿ ಎತ್ತರದ ಚಾರ್ಲಿ ಚಾಪ್ಲಿನ್ ಪ್ರತಿಮೆ ಕಾಮಗಾರಿಗೆ ಸ್ಥಳೀಯ ಕೆಲ ಯುವಕರು ಅಡ್ಡಿಪಡಿಸಿದ್ದಲ್ಲದೆ, ಚಾರ್ಲಿ ಚಾಪ್ಲಿನ್ ಕ್ರಿಶ್ಚಿಯನ್ ಆಗಿರುವುದರಿಂದ ಈ ಪ್ರತಿಮೆ ನಿರ್ಮಿಸುವುದಕ್ಕೆ ಅವಕಾಶ ನೀಡುವುದಿಲ್ಲವೆಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟಿಸಿದ್ದರು ಎಂದು ಹೇಮಂತ್ ಹೇಗಡೆ ದೂರಿದ್ದರು. ಇದರ ಬೆನ್ನಲ್ಲೇ ವಿವಾದ ಭುಗಿಲೆದ್ದಿತ್ತು. ನಂತರ, ಹೇಮಂತ್, ವಿವಾದದ ಹಿನ್ನೆಲೆಯಲ್ಲಿ ಒತ್ತಿನೆಣೆಯಲ್ಲಿ ಚಾಪ್ಲಿನ್ ಪ್ರತಿಮೆ ನಿರ್ಮಿಸುವುದಿಲ್ಲ ಎಂದು ಸಮಸ್ಯೆ ತಿಳಿಗೊಳಿಸಲು ಯತ್ನಿಸಿದ್ದರು. ಆದರೆ ಈ ವಿವಾದದಿಂದಾಗಿ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡ ಹೌಸ್‌ಫುಲ್ ಚಿತ್ರ ಹೌಸ್‍ಫುಲ್ ಪ್ರದರ್ಶನ ಕಾಣುತ್ತೋ ಕಾಯಬೇಕು.