ನಟನೆಯಲ್ಲಿ ಸಣ್ಣ ಪುಟ್ಟ ಗಾಯ ಮಾಮೂಲಿ. ಕೆಲವರು ಡ್ಯೂಪ್ ಸಹಾಯವಿಲ್ಲದೆ ಸಾಹಸ ದೃಶ್ಯಗಳನ್ನು ಮಾಡುವಾಗ ಕೈಕಾಲಿಗೆ ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರಿದ ಘಟನೆಗಳೂ ಇವೆ.
ಇಲ್ಲಿ ಹಾಗಲ್ಲ. ನಟ ಮಯೂರ್ ಪಟೇಲ್ ಸಾವಿನಿಂದ ಬದುಕಿ ಬಂದಿರುವ ಕಥೆ ಇಲ್ಲಿದೆ. ಈಗಷ್ಟೆ ಚೇತರಿಸಿ ಬಂದ ಮಯೂರ್ ತಮ್ಮ ಕರಾಳ ಅಧ್ಯಾಯವನ್ನು ಬಿಚ್ಚಿಟ್ಟದ್ದು ಹೀಗೆ...
ಅದು ಮುನಿಯಾ ಚಿತ್ರ ಶೂಟಿಂಗ್. ಎರಡು ಮರ. ಆ ಎರಡು ಮರಗಳ ಅಂತರ ಸುಮಾರು 20 ಅಡಿ. ಒಂದರಿಂದ ಮತ್ತೊಂದಕ್ಕೆ ಜಿಗಿಯಬೇಕು. ಸೊಂಟಕ್ಕೆ ಹಗ್ಗ ಕಟ್ಟಿಕೊಳ್ಳಲಾಗಿತ್ತು. ಫೈಟ್ ಮಾಸ್ಟರ್ ಆಕ್ಷನ್ ಎಂದ ಕೂಡಲೇ ರಭಸದಿಂದ ಜಿಗಿಯಲು ಹೋದಾಗ ಗ್ರಹಚಾರಕ್ಕೆ ದೇಹ ಚಪ್ಪಟೆ ಆಕಾರದಲ್ಲಿ ಇನ್ನೊಂದು ಮರಕ್ಕೆ ಗುದ್ದಿತು. ಅದು ನೇರವಾಗಿ ಕೊಂಬೆಗೆ ಬಡಿಯಬೇಕಿತ್ತು. ಜಸ್ಟ್ ಮಿಸ್. ಇಲ್ಲವಾದರೆ ಅವತ್ತೆ ಪ್ರೇಕ್ಷಕರ ಪಾಲಿಗೆ ಲೇಟ್ ಮಯೂರ್ ಆಗಬೇಕಿತ್ತು ಎಂದು ರೋಚಕವಾಗಿ ವಿವರಿಸುತ್ತಾರೆ ಮಯೂರ್.
ಹೀಗೆ ಸಾವಿನ ದವಡೆಯಿಂದ ಪಾರಾದರೂ ಕಾಲು ಮುರಿದುಕೊಳ್ಳುವುದನ್ನು ಮಾತ್ರ ಯಾರಿಂದಲೂ ತಪ್ಪಿಸಲಾಗಿಲ್ಲವಂತೆ. ಸ್ವಲ್ಪ ದಿನಗಳ ಬಳಿಕ ಮತ್ತೆ ಫೈಟ್ ಮಾಡುವಾಗ ಕಾಲು ಮುರಿದುಕೊಂಡಿದ್ದಾರೆ. ಅದೇ ಕಾರಣಕ್ಕೆ ನಾಲ್ಕು ತಿಂಗಳು ಹಾಸಿಗೆಯಲ್ಲಿದ್ದರು.
ಈಗ ಚಿತ್ರದ ಮೊದಲ ಪ್ರತಿ ಹೊರಬಂದಿದೆ. ದುನಿಯಾದಂತೆ ಮುನಿಯಾನು ಹಿಟ್ ಆಗಲಿದೆ ಎನ್ನುವುದು ಅವರ ನಂಬಿಕೆ.