ಒಂದು ಚಿತ್ರ ಯಶಸ್ಸಿಗೆ ಹಲವು ಕೈಗಳು ಕಾರಣವಾಗುತ್ತದೆ. ಆದರೆ ತೆರೆಮರೆಯ ಪ್ರಯತ್ನ ಮೇಳೈಸುವುದಿಲ್ಲ ಅಷ್ಟೆ. ಈಗ ಚಿತ್ರದ ಪ್ರತಿಯೊಬ್ಬ ತಂತ್ರಜ್ಞರಿಗೂ ಅಷ್ಟೇ ಬೇಡಿಕೆಗಳು ಹೆಚ್ಚಾಗಿವೆ. ಹೀಗೆ ಬೇಡಿಕೆ ಕುದುರಿಸಿಕೊಂಡ ಪ್ರಮುಖ ಹುದ್ದೆ ಛಾಯಾಗ್ರಾಹಕರು.
ದುನಿಯಾ, ಮುಂಗಾರು ಮಳೆ ಚಿತ್ರದ ಬಳಿಕ ಸಾವಿರ ಸಾವಿರ ಸಂಭಾವನೆ ಪಡೆಯುತ್ತಿದ್ದ ಛಾಯಾಗ್ರಾಹಕರು ಈಗ ಲಕ್ಷದ ಗಡಿ ದಾಟುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ದೊಡ್ಡ ಬ್ಯಾನರ್ ಚಿತ್ರಗಳಲ್ಲಿ ಒಮ್ಮೆ ಕೆಲಸ ಮಾಡಿದರೆ ಮುಗಿಯಿತು. ಅದು ತೆರೆ ಕಾಣುವ ಮುನ್ನವೇ ನಾಲ್ಕೈದು ಚಿತ್ರಕ್ಕೆ ಸಹಿ ಹಾಕಿರುತ್ತಾರೆ.
ಆದರೆ ಇದು ಅಂತವರ ವಿಷಯವಲ್ಲ. ಮಠ ಗುರುಪ್ರಸಾದ್ ಜತೆ ಎದ್ದೇಳು ಮಂಜುನಾಥ ಚಿತ್ರಕ್ಕೆ ಸಹಿ ಹಾಕಿದ ಛಾಯಾಗ್ರಾಹಕ ಅಶೋಕ್ ವಿ. ರಾಮನ್ ಆ ಬಳಿಕ ಯಾವುದೇ ಚಿತ್ರಕ್ಕೂ ಸಹಿ ಹಾಕಿಲ್ಲ. ಒಂದು ಚಿತ್ರ ಪೂರ್ತಿ ಮುಗಿಯುವ ತನಕ ಮತ್ತೊಂದು ಚಿತ್ರಕ್ಕೆ ಸಹಿ ಹಾಕುವುದಿಲ್ಲ. ಇಲ್ಲವಾದರೆ ಚಿತ್ರದ ಮೇಲೆ ಹೊಡೆತ ಬೀಳುವ ಸಾಧ್ಯತೆ ಹೆಚ್ಚು ಎಂಬುದು ಅಶೋಕ್ ಅಭಿಮತ. ಈಗಾಗಲೇ ಎದ್ದೇಳು ಮಂಜುನಾಥ ಚಿತ್ರದ ಛಾಯಾಗ್ರಹಣಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಇಂತಹ ಮತ್ತೊಂದು ಕ್ರೀಯಾಶೀಲ ಚಿತ್ರದ ನಿರೀಕ್ಷೆಯಲ್ಲಿದ್ದಾರೆ ಛಾಯಾಗ್ರಾಹಕ ಅಶೋಕ್.