ಮಳೆಗಾಗಿ ಕನ್ನಡ ಚಿತ್ರರಂಗದ ಹಲವರು ಪ್ರಾರ್ಥಿಸಿದ್ದು ಸುಳ್ಳಲ್ಲ. ಮಳೆ ಬರಲಿ ಮಂಜು ಇರಲಿ ಚಿತ್ರದ ನಿರ್ದೇಶಕರಾದ ವಿಜಯಲಕ್ಷ್ಮಿ ಸಿಂಗ್ ಮಳೆಗಾಗಿ ಚಿತ್ರ ನಿಲ್ಲಿಸಿದ್ದರು. ಹಾಗೂ ನೈಜವಾಗಿಯೇ ಮಳೆಯನ್ನು ಚಿತ್ರೀಕರಿಸಲು ಹವಣಿಸಿದ್ದರು.
ಇದೀಗ ಅದೇ ಮಳೆಯ ಅಬ್ಬರ ಮಳೆಯಲಿ ಜೊತೆಯಲಿ ತಂಡಕ್ಕೂ ತಟ್ಟಿದೆ. ಮಳೆಯಲ್ಲೇ ಶೂಟಿಂಗ್ ನಡೆಸಬೇಕೆಂದು ಸಕಲೇಶಪುರದ ಬ್ಯಾಕರವಳ್ಳಿಗೆ ಹೋದ ಗಣೇಶ್ ತಂಡ ಈಗ ಮಳೆ ಜಾಸ್ತಿಯಾಯಿತು. ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ. ನನಗೆ ಮಳೆ ಬೇಕಿತ್ತು. ಆದರೆ ಇಷ್ಟೊಂದು ಬೇಕಿರಲಿಲ್ಲ ಎನ್ನುತ್ತಾರೆ ನಾಯಕ ನಟ ಗಣೇಶ್. ಗಣೇಶ್ ನಿರ್ಮಾಣದ ನೂತನ ಚಿತ್ರ ಮಳೆಯಲಿ ಜೊತೆಯಲಿ ಚಿತ್ರಕ್ಕಾಗಿ ಸಕಲೇಶಪುರ ಸಮೀಪದ ಬ್ಯಾಕರವಳ್ಳಿಯಲ್ಲಿ ಚಿತ್ರತಂಡ ಬೀಡುಬಿಟ್ಟಿದೆ.
ಚಿತ್ರೀಕರಣ ಆರಂಭವಾದ ಎರಡೇ ದಿನದಲ್ಲಿಯೇ ಜೋರಾಗೇ ಮಳೆ ಹೊಡೆಯಲು ಆರಂಭವಾಗಿದೆ. ನೂರ ಸದಸ್ಯರ ಚಿತ್ರತಂಡದಿಂದ ದಿನಕ್ಕೆರಡು ದೃಶ್ಯಗಳನ್ನಷ್ಟೇ ಚಿತ್ರಿಸಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ಗಣೇಶ್. ಇವರೊಂದಿಗೆ ಪತ್ನಿ ಶಿಲ್ಪಾ ಮತ್ತು ಪುಟ್ಟ ಮಗು ಚಾರಿತ್ರ್ಯ ಕೂಡ ಇದ್ದಾರೆ. ಕೆಲ ದಿನಗಳ ಹಿಂದೆ ಜನರೇಟರ್ ಕೆಸರಿನಲ್ಲಿ ಹೂತು ಹೋಗಿತ್ತು. ಅದನ್ನು ಹೊರತೆಗೆಯಲು ಕ್ರೇನ್ ಕರೆಸಿದ್ದೆವು. ಪ್ರಯತ್ನ ಫಲಿಸಲಿಲ್ಲ. ಮರುದಿನ ಬುಲ್ಡೋಜರ್ ತರಿಸಿ ಮೆಲೆತ್ತಿದೆವು ಎನ್ನುತ್ತಾರೆ ಗಣೇಶ್.
ಇಷ್ಟೇ ಅಲ್ಲ. ಜೋರಾದ ಮಳೆಗೆ ಮರಗಳೂ ಧರೆಗುರುಳುತ್ತಿವೆ. ನಮ್ಮ ತಂಡದ ಹಲವರು ಕಾಲು ಜಾರಿ ಕೆಸರಿನಲ್ಲಿ ಬಿದ್ದಿದ್ದೇವೆ. ಅಲ್ಲದೆ, ತಂಡದ ಎಲ್ಲರಿಗೆ ಸಾಕಷ್ಟು ಔಷಧಗಳನ್ನೂ ತಂದಿದ್ದೇವೆ. ಆದರೆ ಜೋರಾಗಿ ಹೊಡೆಯುತ್ತಿರುವ ಮಳೆ ಒಂದನ್ನು ಹೊರತುಪಡಿಸಿ ನಾವು ತುಂಬಾ ಎಂಜಾಯ್ ಮಾಡುತ್ತಿದ್ದೇವೆ ಎನ್ನುತ್ತಾರೆ ಗಣೇಶ್.