ಕಿರುತೆರೆಯಲ್ಲಿ ನಿರ್ದೇಶನದಿಂದ ಜನಪ್ರಿಯತೆ ಗಳಿಸಿದ್ದ ಬಿ. ಸುರೇಶ್ ಇದೀಗ ದೇವರ ನಾಡಲ್ಲಿ ಇದ್ದಾರೆ. ಅರ್ಥಾತ್, ಅವರು ದೇವರ ನಾಡಲ್ಲಿ ಎಂಬ ಹೆಸರಿನಲ್ಲಿ ಚಿತ್ರವೊಂದನ್ನು ನಿರ್ದೇಶಿಸಲು ಹೊರಟಿದ್ದಾರೆ. ಈಗಾಗಲೇ ಚಿತ್ರಕಥೆ ಕಾರ್ಯ ನಡೆಯುತ್ತಿದ್ದು, ಸೆಪ್ಟೆಂಬರ್ ಹೊತ್ತಿಗೆ ಚಿತ್ರ ಸೆಟ್ಟೇರುವ ನಿರೀಕ್ಷೆ ಇದೆ.
ಶಾಲೆಯೊಂದರಲ್ಲಿ ಬಾಂಬ್ ಸ್ಫೋಟ ನಡೆದ ನಂತರ ಅಲ್ಲಿನ ಸುತ್ತಲ ಪರಿಸರದ ಸ್ಥಿತಿ, ಜನರ ಬಾಯಿಗೊಂದರಂತೆ ಮಾತನಾಡಿಕೊಳ್ಳುವ ರೀತಿಯೇ ಈ ಚಿತ್ರದ ಕಥಾವಸ್ತು. ಇದೊಂದು ಸತ್ಯ ಘಟನೆ ಆಧಾರಿತ ಚಿತ್ರವಾಗಿರುತ್ತದೆ. ಘಟನೆ ನಡೆದ ನಂತರ ಸುತ್ತಮುತ್ತಲ ಜನರ ಪೂರ್ವಾಗ್ರಹಗಳನ್ನು ಕೂಡಾ ಇಲ್ಲಿ ತೋರಿಸಲಾಗುವುದು ಎನ್ನುತ್ತಾರೆ ಸುರೇಶ್.
ಸುರೇಶ್ ಒಬ್ಬ ನಿರ್ದೇಶಕರಾಗಿ ಮಾತ್ರವಲ್ಲ ಪೋಷಕ ನಟರಾಗಿಯೂ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಸ್ಲಂಬಾಲಾ ಚಿತ್ರದಲ್ಲಿ ರಾಜಕಾರಣಿ ಪ್ರಸಾದ್ ನಾಯಕ್ ಪಾತ್ರದಲ್ಲಿ ಅಭಿನಯಿಸಿದ ಬಳಿಕ ಒಂದರ ಮೇಲೊಂದು ಅವಕಾಶಗಳು ಹುಡುಕಿಕೊಂಡು ಬಂತು. ಕತೆ ಚೆನ್ನಾಗಿಲ್ಲ. ನಾನು ಮತ್ತೊಬ್ಬರ ಕಾಲಿಗೆ ಬೀಳುವ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ನೇರವಾಗಿ ಹೇಳುತ್ತಾರೆ. ಸಧ್ಯಕ್ಕೆ ಸುರೇಶ್, ಕಳ್ಳರ ಸಂತೆ, ಜುಗಾರಿ, ಪೆರೋಲ್ ಮೊದಲಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.