ಸವಾರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ರಘು ಮುಖರ್ಜಿಗೆ ಈಗ ಸಾಲು ಸಾಲು ಚಿತ್ರಗಳು ಕಾಯುತ್ತಿವೆ. ಮುಂದಿನ ಸಿನಿಮಾ ಒಪ್ಪಿಕೊಳ್ಳಲು ಸಾಕಷ್ಟು ಚಿಂತನ ಮಂಥನ ಕೂಡ ನಡೆಸಿದ್ದಾರೆ.
ನಾನು ಮೂಲತಃ ಬೆಂಗಳೂರು ಹುಡುಗ. ಬೆಂಗಳೂರು ಬಿಟ್ಟು ಹೋಗಲು ನನಗೆ ಇಷ್ಟವಿಲ್ಲ. ಅದಕ್ಕೆ ಹೊರಗಿನ ಸಾಕಷ್ಟು ಆಫರ್ಗಳನ್ನು ಕೈಬಿಟ್ಟಿದ್ದೇನೆ ಎನ್ನುತ್ತಾರೆ ಅವರು. ಸವಾರಿ ಬಿಡುಗಡೆಯಾದ ಮೇಲೆ 18 ಕತೆಗಳನ್ನು ಕೇಳಿದ್ದಾರಂತೆ. ಆದರೆ ಯಾವುದನ್ನು ಒಪ್ಪಿಕೊಳ್ಳುವುದು ಎಂಬ ಬಗ್ಗೆ ಚಿಂತನೆಯಲ್ಲಿದ್ದಾರೆ. ಒಳ್ಳೆಯ ಕತೆ ಮತ್ತು ತಂಡಕ್ಕಾಗಿ ಕಾಯುತ್ತಿದ್ದೇನೆ. ಸವಾರಿಯಿಂದ ಸಿಕ್ಕಿರುವ ಶ್ರೀಮಂತ ಹುಡುಗನ ಇಮೇಜನ್ನು ಮುರಿಯಲು ಸಿದ್ಧ. ಆದರೆ ಆ ಪಾತ್ರ ನನಗೆ ಸೂಕ್ತವಾಗಿ ಹೊಂದಿಕೆಯಾಗಬೇಕು ಎಂದು ನಗುತ್ತಾರೆ ರಘು.
ಇವರು ಬರೀ ನಟರಲ್ಲ. ಖ್ಯಾತ ರೂಪದರ್ಶಿ ಕೂಡ. ಖ್ಯಾತ ವಿನ್ಯಾಸಕಾರರ ಷೋಗಳಲ್ಲಿ ಭಾಗವಹಿಸಿದ್ದಾರೆ. ಈಗ ಸವಾರಿ ಚಿತ್ರದ ನಂತರ ನನ್ನನ್ನು ಒಬ್ಬ ನಟ ಎಂದೂ ಗುರುತಿಸುತ್ತಿರುವ ಬಗ್ಗೆ ಖುಷಿಯಿಂದ ಹೇಳುತ್ತಾರೆ ರಘು.