ಕನ್ನಡ ಚಿತ್ರರಂಗದಲ್ಲಿ ರೀಮೇಕ್- ಸ್ವಮೇಕ್ ಚಿತ್ರಗಳ ಚರ್ಚೆ ಹಿಂದಿನಿಂದಲೇ ನಡೆಯುತ್ತಿದೆ. ಒಂದೆಡೆ ಭಾರೀ ಪ್ರಮಾಣದಲ್ಲಿ ಕನ್ನಡದ್ಲಲಿ ರಿಮೇಕ್ ನಡೆಯುತ್ತಿದ್ದರೆ, ಇನ್ನೊಂದೆಡೆ ಪರಭಾಷಾ ಚಿತ್ರಗಳಿಂದ 'ಸ್ಪೂರ್ತಿ' ಪಡೆದು ಸ್ವಮೇಕ್ ಎಂದು ಬೋರ್ಡು ಹಾಕಿಕೊಳ್ಳುವುದೂ ಹೆಚ್ಚುತ್ತಿದೆ. ಏನೇ ಇರಲಿ, ಪರಭಾಷಾ ಚಿತ್ರಗಳಿಂದ ಅರ್ಧಂಬರ್ಧ ಕಾಪಿ ಮಾಡಿ ಸ್ವಮೇಕ್ ಎಂದು ಬೀಗುವುದಕ್ಕಿಂತ ಆ ಚಿತ್ರದ ರೀಮೇಕ್ ಮಾಡೋದೇ ಉತ್ತಮ ಎಂಬುದು ಹಲವರ ಅಭಿಪ್ರಾಯ.
ಏನೇ ಇರಲಿ. ಮೊನ್ನೆ ಮೊನ್ನೆ ಶುದ್ಧ ಸ್ವಮೇಕ್ ಚಿತ್ರವಾದ ಯೋಗರಾಜ ಭಟ್ಟರ ಮನಸಾರೆಯ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ರಾಕ್‌ಲೈನ್ ಹೇಳಿದ್ದು ಇದನ್ನೇ. ಹಲವಾರು ಬಾರಿ ನಿರ್ದೇಶಕರು ಕಥೆ ಹಿಡಿದು ನನ್ನ ಬಳಿ ಬರುವಾಗ ಇದು ಅದರಿಂದ ಸ್ಪೂರ್ತಿ ಪಡೆದದ್ದು ಎಂದೆಲ್ಲ ಬೇರೆ ಚಿತ್ರಗಳನ್ನು ಉದಾಹರಿಸುತ್ತಾರೆ. ಎಷ್ಟೋ ಸಲ ನಾಯಕ, ನಾಯಕಿ ಸೇರಿದಂತೆ ಎಲ್ಲ ತಂತ್ರಜ್ಞರು ಎಲ್ಲರೂ ಸಿದ್ಧವಾಗಿದ್ದರೂ ಕೊನೆಗೆ ಚಿತ್ರದ ಕತೆಯೇ ಅಂತಿಮವಾಗಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಸ್ವಮೇಕ್ ಸಹವಾಸ ಯಾಕೆ ಎಂದುಕೊಂಡು ಸ್ಪೂರ್ತಿ ಪಡೆದ ಚಿತ್ರದ ಯಥಾವತ್ ರೀಮೇಕ್ ಚಿತ್ರವನ್ನು ಬಳಸಿಕೊಳ್ಳಬೇಕಾದ ಅನಿವಾರ್ಯತೆ ಬರುತ್ತದೆ ಎನ್ನುತ್ತಾರೆ ರಾಕ್‌ಲೈನ್.
ಆದರೆ, ಇವರು ಯೋಗರಾಜ ಭಟ್ಟರ ಮನಸಾರೆ ಬಗ್ಗೆ ಸಂಪೂರ್ಣ ದಿಲ್ ಖುಷ್ ಆಗಿದ್ದಾರೆ. ಕಾರಣ ಭಟ್ಟರ ಮೊದಲೇ ಸಿದ್ಧವಾದ ಚಿತ್ರದ ಕಥೆ. ಪರಿಪಕ್ವ ನಿರ್ದೇಶನ, ಪೂರ್ವ ತಯಾರಿ. ರಾಕ್‌ಲೈನ್ ಹೇಳುವಂತೆ, ಭಟ್ಟರು ಒಬ್ಬ ಉತ್ತಮ ನಿರ್ದೇಶಕರು. ಈವರೆಗೆ ನಾನು ಕಂಡ ನಿರ್ದೇಶಕರಲ್ಲಿ ಭಟ್ಟರು ನನಗೆ ಅಚ್ಚರಿ ಮೂಡಿಸಿದ್ದಾರೆ. ಚಿತ್ರತಂಡ ಆಯ್ಕೆಯ ಮೊದಲೇ ಸಂಪೂರ್ಣ ಕಥೆಯನ್ನು ಕೈಯಲ್ಲಿ ಹಿಡಿದು ಕೂತಿದ್ದರು ಅವರು. ಮನಸಾರೆ ಅದ್ಭುತವಾಗಿ ಮೂಡಿ ಬಂದಿದೆ. ಹಾಡುಗಳಂತೂ ಫೆಂಟಾಸ್ಟಿಕ್. ಇದು ಈ ವರ್ಷದ ಹಿಟ್ ಚಿತ್ರವಾಗಿ ಹೊರಹೊಮ್ಮಿದರೆ ಆಶ್ಚರ್ಯವಿಲ್ಲ ಎಂದು ವಿವರಿಸಿದ್ದೇ ವಿವರಿಸಿದ್ದು. ಇವರ ನಿರ್ಮಾಣದ ರೀಮೇಕ್ ಚಿತ್ರ ದೇವ್ರು ಇನ್ನು ಚಿತ್ರೀಕರಣ ಪೂರ್ಣಗೊಂಡಿಲ್ಲ.