ಆಶ್ಚರ್ಯವಾಗಬಹುದು. ಎಪ್ಪತ್ತೈದನೇ ವರ್ಷದ ಸಂಭ್ರಮದಲ್ಲಿರುವ ಕನ್ನಡ ಚಿತ್ರರಂಗದಲ್ಲಿ ಕಳೆದ ಏಳು ತಿಂಗಳುಗಳಲ್ಲಿ ಆಗಲೇ ಎಪ್ಪತ್ತೈದು ಚಿತ್ರಗಳು ತೆರೆಕಂಡಿವೆ!
ಹೌದು. ಜುಲೈ 31ರಂದು ಮೂರು ಚಿತ್ರಗಳು ತೆರೆಕಾಣಲಿದ್ದು, ಅಲ್ಲಿಗೆ ಈ ವರ್ಷ ಒಟ್ಟು 77 ಚಿತ್ರಗಳು ತೆರೆಕಂಡಂತಾಗುತ್ತದೆ. ಅಂದರೆ ಪ್ರತಿತಿಂಗಳು ಸರಾಸರಿ 11 ಚಿತ್ರಗಳು. ಆದರೆ ಅಷ್ಟು ಚಿತ್ರಗಳಲ್ಲಿ ಹಿಟ್ ಎನಿಸಿಕೊಂಡಿದ್ದು ಕೆಲವೇ ಬೆರಳಣಿಕೆಯ ಚಿತ್ರಗಳು. ಹೀಗೆ ವಾರಕ್ಕೆ ಮೂರು ಚಿತ್ರಗಳು ಬಿಡುಗಡೆಯಾಗುತ್ತಿದ್ದರೆ, ಶೀಘ್ರದಲ್ಲಿ ಸಂಖ್ಯಾಬಲದಲ್ಲಿ ಸೆಂಚುರಿ ಬಾರಿಸುವುದಂತೂ ಖಂಡಿತ. ಇದು 2009ರಲ್ಲಿ ಗರಿಷ್ಠ ಚಿತ್ರಗಳು ತೆರಕಂಡ ಕನ್ನಡ ಚಿತ್ರರಂಗ ಎಂಬ ಇತಿಹಾಸ ನಿರ್ಮಿಸಿದರೂ ಆಶ್ಚರ್ಯವಿಲ್ಲ. ಆದರೆ ಹಿಟ್ ಆದ ಚಿತ್ರಗಳನ್ನು ಎಣಿಸುತ್ತಾ ಕೂತರೆ..!? ಈ ಪ್ರಶ್ನೆಗೆ ಉತ್ತರ ಹೇಳಬೇಕಾಗಿಲ್ಲ.
ಅಂದಹಾಗೆ, ಜುಲೈ 31ರಂದು ಮೂರು ಚಿತ್ರಗಳು ತೆರೆಕಾಣುತ್ತಿವೆ. ಬಹುನಿರೀಕ್ಷಿತ ಪ್ರೇಮ್ ಕಹಾನಿ. ನಿರ್ದೇಶಕ ಚಂದ್ರು ಬಿಡುಗಡೆಗೂ ಮುನ್ನವೇ 25 ವಾರ ಓಡುವುದು ಖಂಡಿತ ಎಂದು ಹೇಳಿದ್ದಾರೆ. ಇನ್ನೊಂದು ಚಿತ್ರ ಮಳೆ ಬರಲಿ ಮಂಜು ಇರಲಿ. ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆಯುವ ವಿಶ್ವಾಸದಲ್ಲಿದ್ದಾರೆ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್. ಮತ್ತೊಂದು ಚಿತ್ರ ಪ್ರಶಾಂತ್ ಅಭಿನಯದ ವೆಂಕಿ. ಈ ಚಿತ್ರ ಬಹಳ ಹಿಂದೆಯೇ ತೆರೆ ಕಾಣಬೇಕಿತ್ತು. ಆದರೆ ಕಾರಣಾಂತರಗಳಿಂದ ಬಿಡುಗಡೆ ಮುಂದಕ್ಕೆ ಹೋಗಿತ್ತು. ಸಂಖ್ಯಾಬಲದಷ್ಟೇ ಹಿಟ್ ಬಲವೂ ಹೆಚ್ಚುವ ಮಟ್ಟಿಗಿನ ಪಕ್ವತೆ ಬಿಡುಗಡೆಯಾಗುವ ಚಿತ್ರಗಳಲ್ಲೂ ಕಂಡರೆ ಒಳ್ಳೆಯದಿತ್ತು.