ಈ ಗಿಣಿ ಕನ್ನಡ ಮಾತಾಡಲ್ಲ!
ಚಿಂತಾತ ಚಿತಾ ಚಿತಾ... ಎಂದು ನೃತ್ಯ ಮಾಡಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಹುಡುಗಿ ರಾಗಿಣಿ ದ್ವಿವೇದಿ. ಈಕೆ ಶತಮಾನದ ವೀರ ಮದಕರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲ್ಪಟ್ಟ ಬೆಡಗಿ.ಇದಕ್ಕೂ ಮೊದಲು ಹೋಳಿ ಚಿತ್ರಕ್ಕೆ ಸಹಿ ಹಾಕಿದ್ದರೂ ಮೊದಲು ಬಿಡುಗಡೆಯಾಗಿದ್ದು ವೀರಮದಕರಿ. ಈ ಚಿತ್ರದ ಮೂಲಕ ಇದೀಗ ತಮಿಳಿನಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ರಾಗಿಣಿ. ಪಂಜಾಬ್ ಮೂಲದ ಈಕೆ ಓದಿದ್ದು ಬೆಂಗಳೂರು. ಆದರೂ ಕನ್ನಡ ಗೊತ್ತಿಲ್ಲ. ಇದು ಆಶ್ಚರ್ಯಪಡುವ ಸಂಗತಿಯಲ್ಲ ಬಿಡಿ.ಇಂತಿಪ್ಪ ನಟಿ ರಾಗಿಣಿಗೆ ಕನ್ನಡ ಯಾಕಪ್ಪಾ ಬರಲ್ಲ ಅಂದ್ರೆ, ಆಕೆ ಕನ್ನಡ ಕಲಿಯುವಂತಹ ಪರಿಸರ ನನಗೆ ಸಿಕ್ಕಿರಲಿಲ್ಲ. ಕನ್ನಡ ಚಿತ್ರಗಳಲ್ಲಿ ನಟಿಸುತ್ತೇನೆ ಎಂದು ಕೂಡ ನಾನು ಅಂದುಕೊಂಡಿರಲಿಲ್ಲ. ಈಗ ಕನ್ನಡ ಕಲಿಯಲು ಪ್ರಾರಂಭಿಸಿದ್ದೇನೆ ಎಂದು ಸಮರ್ಥನೆ ನೀಡುತ್ತಾರೆ ಈ ಗಿಣಿ. ಈಗಾಗಲೇ ಫೆಮಿನಾ ಮಿಸ್ ಇಂಡಿಯಾ ಸೌತ್ ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಪ್ರಶಸ್ತಿ ಪಡೆಯುವ ಮೂಲಕ ಯಶಸ್ವಿ ಮಾಡೆಲ್ ಎಂದೆನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಫೆಮಿನಾ ಮಿಸ್ ಬ್ಯೂಟಿಫುಲ್ ಹೇರ್ ಪ್ರಶಸ್ತಿಯನ್ನು ಬಾಚಿಕೊಂಡಿಸಿದ್ದಾರೆ. ಕನ್ನಡ, ತಮಿಳು ಮಾತ್ರವಲ್ಲ ಇದೀಗ ಬಾಲಿವುಡ್ ಚಿತ್ರಗಳಲ್ಲೂ ನಟಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ ರಾಗಿಣಿ. ಯಾವುದಕ್ಕೂ ಈ ಗಿಣಿಗೆ ಅದೃಷ್ಟವೂ ಕೂಡಿಬರಬೇಕು.