ಉದ್ಯಾನ ಎಕ್ಸ್‌ಪ್ರೆಸ್ ಚಿತ್ರೀಕರಣಕ್ಕಿಂತಲೂ ಮುಂಚೆಯೇ ಗಿನಿಸ್ ದಾಖಲೆಗೆ ಅರ್ಜಿ ಹಾಕಿಕೊಂಡಿದೆ. ಅದೇಕಂತಿರಾ? ಇದು ನಿರ್ದೇಶಕ ಪ್ರತಾಪ್ ಗೌಡ ಅವರ ವಿಶೇಷ.
ಅತಿ ಕಡಿಮೆ ಸಮಯದಲ್ಲಿ ತಯಾರಾಗುವ ಚಿತ್ರ ಇದಾಗಲಿದೆ ಎನ್ನುತ್ತಾರೆ ಪ್ರತಾಪ್ ಗೌಡ. ಮುಂಬೈನಿಂದ ಬೆಂಗಳೂರಿಗೆ ಬರುವ ಉದ್ಯಾನ ಎಕ್ಸ್‌ಪ್ರೆಸ್‌ನಲ್ಲಿ ನಡೆಯುವ ಘಟನೆಯೇ ಚಿತ್ರದ ಕಥಾವಸ್ತು. ರೈಲಿನಲ್ಲಿ ಬಿಯಾಂಕಾ ದೇಸಾಯಿ ಮತ್ತು ನೀತೂ ಜೊತೆ ಬಾಲಿವುಡ್ಡಿನ ನರ್ಗಿಸ್ ಮತ್ತು ಪ್ರಾಚಿ ದೇಸಾಯಿ ಸಹ ಇದ್ದಾರೆ.
ಚಿತ್ರವನ್ನು ಬಹಳ ಬೇಗ ಮುಗಿಸುವ ನಿಟ್ಟಿನಲ್ಲಿ ಆರಿಪ್ಲೆಕ್ಸ್ ಡಿ21 ಎಂಬ ಹೊಸ ತಂತ್ರಜ್ಞಾನದ ಕ್ಯಾಮೆರಾ ತರಿಸುತ್ತಿದ್ದಾರೆ. ಈ ಕ್ಯಾಮೆರಾವನ್ನು ದೇಶದಲ್ಲಿಯೇ ಮೊದಲ ಬಾರಿಗೆ ಉಪಯೋಗಿಸಲಾಗುತ್ತಿದೆಯಂತೆ. ಈ ಕಾರ್ಯವನ್ನು ಛಾಯಾಗ್ರಾಹಕ ಅಶೋಕ್ ಕಶ್ಯಪ್ ನಿರ್ವಹಿಸಲಿದ್ದಾರೆ. ಅಂದಹಾಗೆ, ಚಿತ್ರೀಕರಣ ಅಗಸ್ಟ್ 10ರಂದು ಪ್ರಾರಂಭವಾಗಲಿದೆ. ಇದಕ್ಕೂ ಮೊದಲು ಚಿತ್ರದ ಮಹತ್ವದ ಸನ್ನಿವೇಶಗಳ ರಿಹರ್ಸಲ್ ನಡೆಯಲಿದೆಯಂತೆ. ಒಟ್ಟಿನಲ್ಲಿ ಚಿತ್ರೀಕರಣಕ್ಕೆ ಎಷ್ಟು ಸಮಯ ಹಿಡಿಯಲಿದೆ? ಚಿತ್ರದ ಬಿಡುಗಡೆ ಯಾವಾಗ ಎಂಬುದೆಲ್ಲವನ್ನೂ ಸಸ್ಪೆನ್ಸ್ ಆಗಿರಿಸಲಾಗಿದೆ.