ಕನ್ನಡ ನಟಿಯರಲ್ಲಿ ಹಲವರು ಇತ್ತೀಚೆಗೆ ತೆಲುಗು-ತಮಿಳು ಚಿತ್ರರಂಗಕ್ಕೂ ಲಗ್ಗೆ ಇಡುತ್ತಿದ್ದಾರೆ. ಇದೀಗ ಅವರ ಸಾಲಿಗೆ ಸೇರುತ್ತಿರುವವರು ಕನ್ನಡದ ಹುಡುಗಿ ಸೋನು.
'ಇಂತಿ ನಿನ್ನ ಪ್ರೀತಿಯ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮೇಕಪ್ ರಾಮಕೃಷ್ಣರ ಪುತ್ರಿ ಸೋನು ನಟಿಯಾಗಬೇಕೆಂಬ ಹಂಬಲವಿಲ್ಲದಿದ್ದರೂ ಸೂರಿ ನಿರ್ದೇಶನದಲ್ಲಿ ಬಣ್ಣ ಹಚ್ಚಿದ್ದರು. ನಟನೆ ಬೇಡವೆಂದುಕೊಂಡರೂ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವಷ್ಟು ಸಾಧನೆ ಅವರಿಂದಾಗಿತ್ತು.
MOKSHA
'ಗುಲಾಮ'ದಲ್ಲೂ ನಾಯಕಿಯಾಗಿದ್ದ ಅವರು ಶಿವರಾಜ್ ಕುಮಾರ್ ಅಭಿನಯದ 'ಪರಮೇಶ ಪಾನವಾಲಾ' ಚಿತ್ರದಲ್ಲಿ ಶಿವಣ್ಣನಿಗೆ ತಂಗಿಯಾಗಿ ಕಾಣಿಸಿಕೊಂಡ ಬಳಿಕ ಹಲವು ನಿರ್ದೇಶಕರು ತಂಗಿ ಪಾತ್ರಕ್ಕೆ ಕರೆಯುತ್ತಾರೆ; ಆ ಮೂಲಕ ತನ್ನನ್ನು ಅದೇ ಪಾತ್ರಕ್ಕೆ ಬ್ರ್ಯಾಂಡ್ ಮಾಡಲೂ ಬಹುದು ಎಂಬುವುದನ್ನು ಸೋನು ನಿರಾಕರಿಸುತ್ತಾರೆ.
ಶಿವಣ್ಣ ಅವರ ಜೊತೆ ಇಷ್ಟು ಬೇಗ ನಟಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಆ ಚಿತ್ರದಿಂದ ನಾನು ತುಂಬಾ ಕಲಿತೆ ಎನ್ನುತ್ತಾರೆ ಸೋನು. ಅಂದ ಹಾಗೆ ಆಕೆಯೀಗ ಎ.ಎಂ.ಆರ್. ರಮೇಶ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಪೊಲೀಸ್ ಕ್ವಾರ್ಟಸ್'ನಲ್ಲಿ ಮತ್ತೆ ಪೂರ್ಣ ಪ್ರಮಾಣದ ನಾಯಕಿಯಾಗುತ್ತಿದ್ದಾರೆ.
ಆಕೆ ತಮಿಳಿನಲ್ಲಿ ಒಪ್ಪಿಕೊಂಡ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಆದರೆ ಖ್ಯಾತ ಕವಿ ಭಾರತಿಯಾರ್‌ರ ತಮಿಳು ಕವಿತೆಯನ್ನಾಧರಿಸಿದ ಚಿತ್ರವಂತೆ. ಅದರಲ್ಲಿ ತನ್ನದು ಪ್ರಮುಖ ಪಾತ್ರ ಎಂದಿದ್ದಾರೆ. ಹೆಚ್ಚಿನ ವಿವರಗಳು ಸದ್ಯದ ಮಟ್ಟಿಗೆ ಅಲಭ್ಯ.