ಸದ್ಯಕ್ಕೆ ಹಿರಿಯ ನಟಿಯರ ಬಳಗ ಕಿರುತೆರೆಯಲ್ಲಿ ಬ್ಯುಸಿಯಾಗಿದೆ. ಲಕ್ಷ್ಮೀ ಅವರ ಇತ್ತೀಚೆಗೆ 'ಕಥೆಯಲ್ಲ, ಇದು ಜೀವನ' ಎಂಬ ಕಾರ್ಯಕ್ರಮದಲ್ಲಿ ಕಂಗೊಳಿಸುತ್ತಿದ್ದರೆ, ಮಾಳವಿಕಾ ಅವಿನಾಶ್ ಅವರು 'ಬದುಕು ಜಟಕಾಬಂಡಿ' ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಅವರಂತೆ ಹಲವು ಹಿರಿಯ ನಾಯಕಿಯರ ಹೆಜ್ಜೆಯಲ್ಲೇ ಮತ್ತೆ ಸಾಗುತ್ತಿರುವವರು ತಾರಾ.
ಹೌದು.. ತಾರಾ ಮತ್ತೆ ಕಿರುತೆರೆಯತ್ತ ಹೆಜ್ಜೆ ಹಾಕಿದ್ದಾರೆ. ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ತಾರಾ ಮತ್ತೆ ಕಿರುತೆರೆಯಲ್ಲಿ ಬಣ್ಣ ಹಚ್ಚಲು ಸಿದ್ಧರಾಗಿದ್ದಾರೆ. ಅವರು ತಮ್ಮ ಹೆಸರನ್ನು ಅನುರಾಧಾ ಎಂದು ಬದಲಾಯಿಸಿಕೊಂಡ ನಂತರ ಕಿರುತೆರೆಯಿಂದ ದೂರ ಉಳಿದಿದ್ದರು.
ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಇದು ಯಾರು ಬರೆದ ಕತೆಯೋ' ಎಂಬ ಕಾರ್ಯಕ್ರಮಕ್ಕೀಗ ತಾರಾ ನಿರೂಪಕಿ. ಇಲ್ಲಿ ಕೂಡ ಹತ್ತಾರು ನೊಂದ ಮನಸ್ಸುಗಳು ವೇದಿಕೆ ಏರಲಿವೆ. ಅವರು ತಮ್ಮ ಕಷ್ಟ-ಸುಖ ಹಂಚಿಕೊಳ್ಳುತ್ತಾರೆ. ಅಂಥ ಹತ್ತಾರು ಜೀವಗಳನ್ನು ಹತ್ತಿರ ಕರೆದು ಸಂತೈಸಲಿದ್ದಾರೆ ತಾರಾ.