ಇದು ರಶ್ಮಿಯ ಸ್ವರಾಂಜಲಿ
ದುನಿಯಾ ಚಿತ್ರದಿಂದಾಗಿ ಜಗತ್ತೇ ಬದಲಾಯಿತು ಎಂದುಕೊಳ್ಳುತ್ತಿದ್ದ ರಶ್ಮಿಗೆ ವೆಂಕಿ ಚಿತ್ರ ಕೈಕೊಟ್ಟಿತು. ಇದರಿಂದ ಚಿತ್ರರಂಗಕ್ಕೆ ಗುಡ್ಬೈ ಹೇಳೋದೇ ಲೇಸು ಎನ್ನುತ್ತಿರುವಾಗಲೇ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡು ಗಾಂಧಿನಗರಕ್ಕೆ ದಿಟ್ಟ ಹೆಜ್ಜೆ ಇರಿಸಿದ್ದಾರೆ.ಇತ್ತೀಚೆಗೆ ಬಿಡುಗಡೆಯಾದ ವೆಂಕಿ ಚಿತ್ರ ಬಾಕ್ಸ್ ಆಫೀಸಿನಲ್ಲಿ ಸೋತು ಹೋದಾಗ ಚಿತ್ರರಂಗದಲ್ಲಿ ರಶ್ಮಿ ಕತೆ ಮುಗಿಯಿತು ಎಂದು ಮಾತನಾಡಿಕೊಳ್ಳುತ್ತಿದ್ದರು ಗಾಂಧಿನಗರದ ಪಂಡಿತರು. ಇದೀಗ ಮತ್ತೊಂದು ಚಿತ್ರ ಮನೆ ಬಾಗಿಲಿಗೆ ಬಂದಿದೆ. ತಂಗಿಯ ಮನೆ ಎಂಬ ಚಿತ್ರ ಪ್ರಾರಂಭಿಸಿ, ಬಿಡುಗಡೆಯಾಗುವಷ್ಟರಲ್ಲಿ ಅಸಹಾಯಕರಾಗಿದ್ದ ಶ್ರೀನಿವಾಸ್ ಈ ಚಿತ್ರವನ್ನು ಮಾಡುತ್ತಿದ್ದಾರೆ. ಚಿತ್ರಕ್ಕೆ ಸ್ವರಾಂಜಲಿ ಎಂದು ಹೆಸರಿಡಲಾಗಿದೆ. ಚಿತ್ರಕ್ಕೆ ಕತೆ, ಚಿತ್ರಕತೆ ಬರೆದು ನಿರ್ದೇಶಿಸುವುದರ ಜೊತೆಗೆ ಚಿತ್ರದ ನಿರ್ಮಾಣವನ್ನು ಇವರೇ ಮಾಡಲಿದ್ದಾರೆ.ಚಿತ್ರಕ್ಕೆ ನಾಯಕನಾಗಿ ತೆಲುಗಿನ ರಮಣ ಅಭಿನಯಿಸುತ್ತಿದ್ದಾರೆ. ಇವರೊಂದಿಗೆ ಸ್ಪೂರ್ತಿ, ರಮೇಶ್ ಭಟ್ ನಟಿಸುತ್ತಿದ್ದಾರೆ. ಅಂದ ಹಾಗೆ ಚಿತ್ರವನ್ನು ಸೆಪ್ಟಂಬರ್ 17ರಂದು ಪ್ರಾರಂಭಿಸುವ ಯೋಜನೆಯಲ್ಲಿದ್ದಾರೆ ನಿರ್ದೇಶಕರು.