ರಾಧಿಕಾ ಪಂಡಿತ್ ನಟಿಸಿದ ಮೊದಲ ಚಿತ್ರ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಇದು ಮೊದಲು ಬಣ್ಣ ಹಚ್ಚಿದ ಚಿತ್ರವಾದರೂ ಆಕೆಯ ನಾಲ್ಕನೇ ಚಿತ್ರವಾಗಿ ಬಿಡುಗಡೆಯಾಗುತ್ತಿದೆ.
ಕೆಲವು ವರ್ಷಗಳ ಹಿಂದೆ 18 ನೇ ಕ್ರಾಸ್ ಎಂಬ ಚಿತ್ರಕ್ಕೆ ಬಣ್ಣ ಹಚ್ಚಿದ್ದರು. ಇದು ಮೊಗ್ಗಿನ ಮನಸು ಚಿತ್ರಕ್ಕೂ ಹಿಂದೆ. ಚಿತ್ರೀಕರಣ ಮುಗಿಯುವ ಹೊತ್ತಿಗೆ ನಿರ್ಮಾಪಕ ಚಿಕ್ಕಣ್ಣ ತೀರಿಕೊಂಡರು. ಹಾಗಾಗಿ ಚಿತ್ರ ನಿಂತು ಹೋಗಿತ್ತು. ಇನ್ನು ಚಿತ್ರ ಬಿಡುಗಡೆಯಾಗುವುದಿಲ್ಲ ಎನ್ನುವ ಹೊತ್ತಿಗೆ ದುನಿಯಾ ಚಿತ್ರದ ನಿರ್ಮಾಪಕರಾದ ಟಿ.ಪಿ. ಸಿದ್ದರಾಜು ಬಂದು ಚಿತ್ರಕ್ಕೆ ಅಭಯ ನೀಡಿದ್ದಾರೆ. ಚಿತ್ರಕ್ಕೆ ಮತ್ತೆ ಚಾಲನೆ ನೀಡಿ, ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಚಿತ್ರದ ನಾಯಕ ದೀಪಕ್ ಸಧ್ಯಕ್ಕೆ ಬೇಡಿಕೆಯಿಲ್ಲದ ನಾಯಕ. ಜೊತೆಗೆ ನಿರ್ದೇಶಕರು ಸೇರಿದಂತೆ ಚಿತ್ರತಂಡದವರೆಲ್ಲಾ ಹೊಸಬರೇ. ಇಷ್ಟಾದರೂ ಚಿತ್ರ ಮತ್ತೆ ಪ್ರಾರಂಭವಾಗಿದೆ ಎಂದರೆ ಅದಕ್ಕೆ ಏಕೈಕ ಕಾರಣ ರಾಧಿಕಾ ಪಂಡಿತ್ ಎಂದರೆ ತಪ್ಪಿಲ್ಲ. ಈಕೆ ಚಿತ್ರವನ್ನು ಗೆಲ್ಲಿಸದಿದ್ದರೂ, ತಮ್ಮ ಪ್ರಬುದ್ಧ ಅಭಿನಯದಿಂದ ಸಾಕಷ್ಟು ಹೆಸರು ಮಾಡಿಕೊಂಡಿದ್ದಲ್ಲದೆ, ಸದ್ಯ ಬೇಡಿಕೆಯಲ್ಲಿರುವ ಮುಂಚೂಣಿಯ ನಟಿ.
MOKSHA
ಅಂದಹಾಗೆ ಮೊನ್ನೆ ಮೊನ್ನೆ ಮೊಗ್ಗಿನ ಮನಸು ಚಿತ್ರದ ಅಭಿನಯಕ್ಕಾಗಿ ಫಿಲಂಫೇರ್ ಪ್ರಶಸ್ತಿ ಪಡೆದ ರಾಧಿಕಾ ಪಂಡಿತ್ಗೆ ಈಗ ಅವಕಾಶವೂ ಹೆಚ್ಚಿದೆಯಂತೆ. ದೊಡ್ಡ ದೊಡ್ಡ ಆಫರ್ಗಳೂ ಬೆನ್ನು ಬಿದ್ದಿವೆಯಂತೆ. ಹಾಗಂತ ರಾಧಿಕಾ ಫುಲ್ ಖುಷಿಯಲ್ಲಿದ್ದಾಳೆ. ಆದರೆ ಫಿಲಂಫೇರ್ ಪ್ರಶಸ್ತಿಯನ್ನು ರಮ್ಯ, ಪೂಜಾ ಗಾಂಧಿ, ಡೈಸಿ ಮತ್ತಿತರರ ಜತೆಗೆ ಪೈಪೋಟಿ ನಡೆಸಿ ಗೆದ್ದುಕೊಂಡಿರುವುದಕ್ಕೆ ಖುಷಿ ಪಡುವ ಜತೆಗೆ ಆಶ್ಚರ್ಯವನ್ನೂ ವ್ಯಕ್ತಪಡಿಸುತ್ತಾರೆ.
ಹಾಗಾಗಿ, ಈಗ ಚಿತ್ರಕ್ಕೆ ಈಕೆಯ ಮುಖ ನೋಡಿಯಾದರೂ ಪ್ರೇಕ್ಷಕ ಬಂದೇ ಬರುತ್ತಾನೆ ಎಂಬುದು ನಿರ್ಮಾಪಕರ ಲೆಕ್ಕಾಚಾರ. ಏನೇ ಆಗಲಿ, ಚಿತ್ರ ಬಿಡುಗಡೆಯಾಗುತ್ತಿರುವುದಂತೂ ನಿಜ. ರಾಧಿಕಾರ ಮೊದಲ ಚಿತ್ರಕ್ಕೆ ಪ್ರೇಕ್ಷಕ ಏನನ್ನುತ್ತಾನೋ ಕಾದು ನೋಡಬೇಕು.