ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪರಭಾಷಾ ಚಿತ್ರಗಳ ವಿರುದ್ಧ ಬಂಡೆದ್ದ ಕನ್ನಡ ನಿರ್ಮಾಪಕರು! (Magadhee | Kannada Cinema | Telugu Cinema | Rajendra Singh Babu | Raj)
ಸುದ್ದಿ/ಗಾಸಿಪ್
Feedback Print Bookmark and Share
 
Rajendra Singh Babu
MOKSHA
ಪರಭಾಷಾ ಚಿತ್ರಗಳ ಹಾವಳಿಯ ವಿರುದ್ಧ ತಿರುಗಿಬಿದ್ದಿರುವ ಕನ್ನಡ ಚಿತ್ರ ನಿರ್ಮಾಪಕರೆಲ್ಲರೂ ಜತೆಯಾಗಿ ಬೀದಿಗಿಳಿದಿದ್ದಾರೆ. ಜೈಲು ಸೇರಿದರೂ ಸರಿ, ಸಾಯುವ ತನಕ ಹೋರಾಟ ನಿಲ್ಲಿಸೋದಿಲ್ಲ. ನಮಗೆ ನ್ಯಾಯ ಬೇಕು ಎಂದು ನಿರ್ಮಾಪಕರು ಗುಡುಗಿದ್ದಾರೆ.

ತೆಲುಗಿನ ಮಗಧೀರ ಚಿತ್ರದ ವಿರುದ್ಧ ಸಿಡಿದೆದ್ದ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಿರ್ಮಾಪಕರು ಇಂದು ಭಾರೀ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ನಿರ್ಮಾಪಕ ರಾಜೇಂದ್ರ ಬಾಬು, ಸಾಯುವ ತನಕ ಹೋರಾಟ ನಿಲ್ಲಿಸುವುದಿಲ್ಲ. ಜೈಲಿಗೆ ಹೋದರೂ ಸರಿ. ಏನೇ ಆಗಲಿ, ಪರಭಾಷಾ ಚಿತ್ರಗಳ ಹಾವಳಿ ನಿಲ್ಲುವವರೆಗೆ ನಾವು ಹೋರಾಟ ನಿಲ್ಲಿಸುವುದಿಲ್ಲ. ನಾವು ಚಿತ್ರಮಂದಿರಗಳನ್ನು ಕೆಡವಲೂ ಹೇಸುವುದಿಲ್ಲ. ನಮಗೆ ನ್ಯಾಯ ದಕ್ಕಬೇಕು ಅಷ್ಟೆ ಎಂದು ಗುಡುಗಿದ್ದಾರೆ.

ರಾಜ್‌ಗೂ ಕಾದಿದೆ ಆತಂಕ- ಪರಭಾಷಾ ಚಿತ್ರಗಳು ರಾಜ್ಯದಲ್ಲಿ ಏಳು ವಾರಗಳ ನಂತರ ಬಿಡುಗಡೆ ಕಾಣಬೇಕು. ಆದರೆ ಈ ನಿಯಮ ಇಂದು ಗಾಳಿಗೆ ತೂರಲಾಗಿದೆ. ಚಿತ್ರ ಬಿಡುಗಡೆಯಾಗಿ ವಾರದಲ್ಲೇ ಇಲ್ಲೂ ಬಿಡುಗಡೆ ಕಾಣುತ್ತಿವೆ ಇತರ ಭಾಷಾ ಚಿತ್ರಗಳು. ಇನ್ನೇನು ಬಿಡುಗಡೆ ಕಾಣಬೇಕಾಗಿರುವ ರಾಜ್ ಚಿತ್ರಕ್ಕೂ ಆತಂಕ ಕಾದಿದೆ. ರಾಜ್ ಬಿಡುಗಡೆಯಾಗಬೇಕಿರುವ ಚಿತ್ರಮಂದಿರದ ಪಕ್ಕದಲ್ಲೆಲ್ಲ ಮಗಧೀರ ಬಂದು ಕೂತಿದ್ದಾನೆ. ನಾವು ಈಗಾಗಲೇ ಈ ಎಚ್ಚರಿಕೆಯನ್ನು ಪ್ರೇಮ್‌ಗೆ ನೀಡಿದ್ದೇವೆ ಎಂದರು ಬಾಬು.

ಮೊದಲು ಕನ್ನಡ ಚಿತ್ರಗಳಿಗೆ ಆದ್ಯತೆ ನೀಡಬೇಕು. ಆಮೇಲೆ ಉಳಿದವರ ಚಿಂತೆ. ಆದರೆ ಇಲ್ಲಿ ಹಾಗಾಗುತ್ತಿಲ್ಲ. ಪರಭಾಷಾ ಚಿತ್ರಗಳಿಗೇ ಮಣೆ ಹಾಕಲಾಗುತ್ತಿದೆ. ಇದಕ್ಕೆಲ್ಲ ಮೂಲ ಕಾರಣ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದ ಗಂಗರಾಜು ಅವರೇ ಕಾರಣ ಎಂದು ಗಂಗರಾಜು ವಿರುದ್ಧ ಕಿಡಿ ಕಾರಿದರು ಬಾಬು.

ಕನ್ನಡ ಚಿತ್ರಗಳನ್ನು ಪರಭಾಷಾ ಚಿತ್ರಗಳು ಕೊಲ್ಲುತ್ತಿವೆ. ಚಿರಂಜೀವಿ ಚಿತ್ರ 3 ಲಕ್ಷ ರೂ ಇದ್ದಿದ್ದು ಇಂದು ನಾಲ್ಕು ಕೋಟಿ ಆಗಿದೆ. ರಜನಿ ಚಿತ್ರ ಐದು ಕೋಟಿ ರೂಗೇರಿದೆ. ನಮ್ಮ ಚಿತ್ರಗಳನ್ನು ಮೂಸುವವರೇ ಇಲ್ಲ. ಕನ್ನಡಿಗರೇ ಹೆಚ್ಚಿರುವ ಸ್ತಳಗಳಲ್ಲೂ ಪರಭಾಷಾ ಚಿತ್ರಗಳನ್ನು ಬಿಡುಗಡೆ ಮಾಡುತ್ತಿದೆ ಎಂದರೆ ಪರಿಸ್ಥಿತಿ ಎಷ್ಟು ಕೈಮೀರಿ ಹೋಗಿದೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದೂ ಬಾಬು ಆಕ್ರೋಶ ವ್ಯಕ್ತಪಡಿಸಿದರು.
Magadheer
WD


ಡಾ.ರಾಜ್‌ರನ್ನು ಹಿಟ್ಲರ್ ಎಂದ್ರು- ಈ ಹಿಂದೆ ಅಮಿತಾಬ್ ಬಚ್ಚನ್ ಅವರ ಚಿತ್ರ ಬಿಡುಗಡೆಯ್ನನು ವಿರೋಧಿಸಿದ್ದಕ್ಕೆ ಡಾ. ರಾಜ್ ಅವರನ್ನೇ ಹಿಟ್ಲರ್‌ಗೆ ಹೋಲಿಸಿ ದೂರಿದ್ದರು. ಪರಭಾಷಾ ಚಿತ್ರಗಳ ವಿತರಕರು ಕನ್ನಡ ಚಿತ್ರಗಳನ್ನೇ ಕೊಲ್ಲುತ್ತಿದ್ದಾರೆ. ಯಾವ ಕಾನೂನು ನೀತಿಗಳೂ ಇವರಿಗೆ ಪೆಡಂಭೂತವಾಗಿ ನಿಲ್ಲುತ್ತಿಲ್ಲ. ಚಾಪೆ ಹಾಸಿದರೆ ರಂಗೋಲಿ ಕೆಳಗೆ ನುಸುಳುವಷ್ಟು ಚತುರರಾಗಿದ್ದಾರೆ ಇವರು ಎಂದು ದೂರಿದರು ರಾಜೇಂದ್ರ ಸಿಂಗ್ ಬಾಬು.

ನಿರ್ಮಾಪಕ ಕೆ ಮಂಜು ಮಾತನಾಡಿ, ಕನ್ನಡ ಚಿತ್ರಗಳು ಸರ್ವನಾಶವಾಗುವಂತೆ ಪರಭಾಷಾ ಚಿತ್ರಗಳ ಹಾವಳಿ ಮುಂದುವರಿದಿದೆ. ಆದರೆ ಇದ್ಕಕೆಲ್ಲ ನಾವು ಜಗ್ಗುವುದಿಲ್ಲ. ಪ್ರಾಣ ಒತ್ತೆಯಿಟ್ಟಾದರೂ ಹೋರಾಡುತ್ತೇವೆ. ಪರಭಾಷಾ ಚಿತ್ರಗಳ ಹಾವಳಿ ನಿಲ್ಲುವವರೆಗೆ ಉಗ್ರ ಹೋರಾಟ ನಮ್ಮದು ಎಂದರು.

ನಿರ್ಮಾಪಕಿ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಮಾತನಾಡುತ್ತಾ, ಮಗಧೀರ ಚಿತ್ರದ ಹೊಡೆತಕ್ಕೆ ನಾನೇ ಸಿಕ್ಕಿ ನಲುಗಿದ್ದೇನೆ. ಮಳೆ ಬರಲಿ ಮಂಜೂ ಇರಲಿ ಚಿತ್ರ ಬಿಡುಗಡೆಯಾದ ಪಕ್ಕದ ಚಿತ್ರಮಂದಿರಕ್ಕೆ ಮಗಧೀರ ಬಂದು ಕುಳಿತಿದ್ದಾನೆ. ಇದರ ನೇರ ಪರಿಣಾಮ ನನ್ನ ಚಿತ್ರದ ಮೇಲೆ ಆಗಿದೆ. ಹಾಗಾಗಿ ವಿಧಿಯಿಲ್ಲದೆ ನಾವೆಲ್ಲರೂ ಬೀದಿಗಿಳಿಯಲೇಬೇಕಾಗಿದೆ ಎಂದರು.

ವಿಜಯಕುಮಾರ್ ವಜಾ- ಕನ್ನಡ ಚಿತ್ರ ನಿರ್ಮಾಪಕರ ಒತ್ತಡಕ್ಕೆ ಮಣಿದಿರುವ ಚಲನಚಿತ್ರ ವಾಣಿಜ್ಯ ಮಂಡಳಿ ತನ್ನ ಸದಸ್ಯತ್ವದಿಂದ ತೆಲುಗಿನ ಮಗಧೀರ್ ಚಿತ್ರದ ವಿತರಕ ವಿಜಯ ಕುಮಾರ್ ಅವರನ್ನು ವಜಾಗೊಳಿಸಿದೆ. ವಿಜಯ ಕುಮಾರ್ ಅವರನ್ನು ವಜಾ ಮಾಡದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದಿದ್ದ ನಿರ್ಮಾಪಕರ ಬೆದರಿಕೆಗೆ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲ ಸಭೆ ಕರೆದು ಅವರನ್ನು ವಜಾಗೊಳಿಸುವ ವಿಚಾರ ಪ್ರಕಟಿಸಿದ್ದಾರೆ. ಇದೇ ವೇಳೆ ನಿರ್ಮಾಪಕರು ಏಳು ಬೇಡಿಕೆಗಳನ್ನು ಮಂಡಳಿಗೆ ಸಲ್ಲಿಸಿದೆ.

ಮಗಧೀರ್ ವಿರುದ್ಧ ಆಕ್ರೋಶ ಯಾಕೆ?- ಮಗಧೀರ್ ವಿರುದ್ಧ ನಿರ್ಮಾಪಕರು ಉಗ್ರರೂಪ ತಾಳಲು ಕಾರಣವೂ ಇದೆ. ಚಲನಚಿತ್ರ ವಾಣಿಜ್ಯ ಮಂಡಳಿಯ ನಿಯಮಗಳ ಪ್ರಕಾರ, ಬೆಂಗಳೂರಿನಲ್ಲಿ ಪರಭಾಷಾ ಚಿತ್ರವೊಂದು 17 ಚಿತ್ರ ಮಂದಿರಗಳಲ್ಲಿ ಹಾಗೂ ರಾಜ್ಯದ ಇತರ ಕಡೆಗಳಲ್ಲಿ ನಾಲ್ಕು ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆ ಮಾಡಬೇಕು. ಆದರೆ ವಿತರಕ ವಿಜಯ ಕುಮಾರ್ ಈ ನಿಯಮಗಳನ್ನು ಉಲ್ಲಂಘಿಸಿ ರಾಜ್ಯದೆಲ್ಲೆಡೆ 50 ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ವಿತರಕ ವಿಜಯ ಕುಮಾರ್ ಮೊದಲ ವಾರದಲ್ಲಿ ಹೆಚ್ಚುವರಿಯಾಗಿ ಒಂದು ಹಾಗೂ 2ನೇ ವಾರದಲ್ಲಿ 11 ಚಿತ್ರಮಂದಿರಗಳಲ್ಲಿ ಮಗಧೀರ್ ಚಿತ್ರವನ್ನು ಬಿಡುಗಡೆಗಡೆಗೊಳಿಸಿದ್ದಾರೆ ಎಂಬುದು ನಿರ್ಮಾಪಕರ ದೂರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತೆಲುಗು ಸಿನಿಮಾ, ಕನ್ನಡ ಸಿನಿಮಾ, ರಾಜೇಂದ್ರಸಿಂಗ್ ಬಾಬು, ರಾಜ್, ಕೆ ಮಂಜು