ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಜನೀಕಾಂತ್ ಮಗಳಿಗೆ ಕನ್ನಡ ಸಿನಿಮಾ ಮಾಡುವಾಸೆ! (Soundarya Rajnikanth | Rajnikanth | Kannada Cinema | Sulthan)
ಸುದ್ದಿ/ಗಾಸಿಪ್
Feedback Print Bookmark and Share
 
WD
ಹೌದು. ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್ ಮಗಳು ಸೌಂದರ್ಯ ರಜನೀಕಾಂತ್‌ಗೆ ಕನ್ನಡದಲ್ಲೂ ಚಿತ್ರಗಳನ್ನು ಮಾಡುವಾಸೆಯಂತೆ. ಹಾಗಂತ ಆಕೆಯೇ ಹೇಳಿಕೊಂಡಿದ್ದಾರೆ. ಸದ್ಯ ರಜನೀಕಾಂತ್ ತಾರಾಗಣದ ಸುಲ್ತಾನ್- ದಿ ವಾರಿಯರ್ ಎಂಬ ತಮಿಳು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈವರೆಗೆ ಹಲವು ಚಿತ್ರಗಳಿಗೆ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡಿದ ಅನುಭವ ಸೌಂದರ್ಯಾ ಬೆನ್ನಿಗಿದೆ. ಜತೆಗೆ ನಿರ್ಮಾಪಕಿಯಾಗಿಯೂ ಅನುಭವವಿದೆ. ನಿರ್ದೇಶಕಿಯಾಗಿ ಸುಲ್ತಾನ್ ಚಿತ್ರ ಹೊಸತು.

ರಜನೀಕಾಂತ್ ಅವರ ಎರಡನೇ ಮಗಳು ಸೌಂದರ್ಯಾ ಹೆಸರಿಗೆ ತಕ್ಕಂತೆ ಸೌಂದರ್ಯದ ಖನಿ. ಇನ್ನೂ 24ರ ಹರೆಯದ ಈಕೆ ಹೇಳುವಂತೆ, ''ನನಗೆ ಕನ್ನಡ ಹಾಗೂ ತೆಲುಗು ಚಿತ್ರಗಳನ್ನು ಮಾಡಲು ಆಸಕ್ತಿಯಿದೆ. ಕನ್ನಡದಿಂದ ಹಲವು ಆಫರ್‌ಗಳೂ ಬಂದಿವೆ. ಹಲವು ಸ್ಕ್ರಿಪ್ಟ್‌ಗಳನ್ನೂ ನೋಡಿದ್ದೇನೆ. ಆದರೆ ಯಾವುದೂ ಅಂತಿಮವಾಗಿಲ್ಲ. ಈಗಾಗಲೇ ನಿರ್ದೇಶಕ ಪ್ರೇಮ್, ಪುನೀತ್ ರಾಜ್‌ಕುಮಾರ್ ಜತೆಗೆ ಮಾತುಕತೆಯೂ ನಡೆಯುತ್ತಿದೆ. ಆದರೆ ಏನೂ ಈವರೆಗೆ ನಿರ್ಧಾರವಾಗಿಲ್ಲ'' ಎನ್ನುತ್ತಾರೆ.

''ನಾನು ಹಲವು ಕನ್ನಡ ಸಿನಿಮಾ ನೋಡಿದ್ದೇನೆ. ಜೋಗಿ, ಸರ್ಕಸ್... ಚಿತ್ರಗಳನ್ನೂ ನೋಡಿದ್ದೇನೆ. ಬೆಂಗಳೂರು ನನಗೆ ತುಂಬ ಇಷ್ಟ. ಅದು ನನ್ನ ಎರಡನೇ ಮನೆ ಇದ್ದಂತೆ. ನಾನು ಹುಟ್ಟಿದ್ದು ಚೆನ್ನೈಯಲ್ಲಾಗಿರಬಹುದು. ಆದರೆ ನನ್ನ ಅಜ್ಜ, ಅಪ್ಪ ಎಲ್ಲರೂ ಬೆಂಗಳೂರಿನವರು. ಹೀಗಾಗಿ ನನಗೆ ಕರ್ನಾಟಕದ ಮೇಲೆ ಪ್ರೀತಿಯಿದೆ. ಮನೆಭಾಷೆ ಮರಾಠಿಯಾಗಿರುವುದರಿಂದ ನನಗೆ ಕನ್ನಡ ಮಾತನಾಡಿ ಅಭ್ಯಾಸವಿಲ್ಲ. ಆದರೆ ಕನ್ನಡವನ್ನು ತುಂಬ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. ನನ್ನ ಅಕ್ಕ ಐಶ್ವರ್ಯಾಗೆ ಕನ್ನಡ ತುಂಬ ಚೆನ್ನಾಗಿ ಮಾತನಾಡಲೂ ಗೊತ್ತಿದೆ'' ಎನ್ನುತ್ತಾರೆ ಸೌಂದರ್ಯಾ ರಜನೀಕಾಂತ್.

''ತೆಲುಗಿನಲ್ಲೂ ಚಿತ್ರ ಮಾಡುವ ಬಗ್ಗೆಯೂ ಮಾತುಕತೆ ನಡೆಸಿದ್ದೇನೆ. ನಟ ಮಹೇಶ್ ಬಾಬು ಹಾಗೂ ನಿರ್ದೇಶಕ ಪುರಿ ಜಗನ್ನಾಥ್ ಬಳಿ ಮಾತಕತೆ ನಡೆದಿದೆ. ತಮಿಳು, ತೆಲುಗಿನಲ್ಲಿ ಒಂದೇ ಚಿತ್ರ ರಚಿಸುವ ಬಗ್ಗೆ ಚಿಂತನೆಯಿದೆ. ಯಾವುದೂ ಅಂತಿಮವಾಗಿಲ್ಲ'' ಎನ್ನುತ್ತಾರೆ ಈ ರಜನೀಕಾಂತ್ ಕುವರಿ.
IFM

''ಭಾವ ಧನುಷ್ (ಅಕ್ಕ ಐಶ್ವರ್ಯಾಳ ಗಂಡ) ಅವರನ್ನು ಎಲ್ಲರೂ ರಜನೀಕಾಂತ್‌ಗೆ ಹೋಲಿಸುತ್ತಾರೆ. ಆದರೆ ಭಾವ ಎಂದೀಗೂ ರಜನೀಕಾಂತ್ ಆಗಲು ಸಾಧ್ಯವಿಲ್ಲ. ಯಾರಿಗೂ ರಜನೀಕಾಂತ್ ತುಂಬಲು ಸಾಧ್ಯವಿಲ್ಲ. ರಜನೀಕಾಂತ್ ಎಂದರೆ ಒಬ್ಬರು ಮಾತ್ರ, ಅವರೇ ರಜನೀಕಾಂತ್. ನನಗೆ ಅಪ್ಪ ರಜನೀಕಾಂತ್ ಅವರೇ ಸೂಪರ್ ಸ್ಟಾರ್. ನಾನು ಅಪ್ಪನ ದೊಡ್ಡ ಅಭಿಮಾನಿ'' ಎನ್ನುತ್ತಾರೆ ಸೌಂದರ್ಯಾ. ''ಆದರೂ, ಧನುಷ್ ಕೂಡಾ ಅತ್ಯುತ್ತಮ ನಟ ಎಂಬುದರಲ್ಲಿ ಅನುಮಾನವೇ ಇಲ್ಲ. ಆತ ನಮ್ಮ ಮನೆಗೆ ಅತ್ಯುತ್ತಮ ಅಳಿಯ ಕೂಡಾ. ಅಂತಹ ಒಳ್ಳೆಯ ಅಳಿಯನ್ನು ನಮ್ಮ ಮನೆ ಪಡೆಯಲು ಪುಣ್ಯ ಮಾಡಿದೆ'' ಎಂದೂ ವಿವರಿಸುತ್ತಾರೆ ಸೌಂದರ್ಯಾ ರಜನೀಕಾಂತ್.

''ಹಲವರು ನನ್ನನ್ನು ನಟನೆಗೆ ಸೂಚಿಸುತ್ತಾರೆ. ಆದರೆ ನನಗೆ ನಟನೆ ಇಷ್ಟವಿಲ್ಲ. ನಾನು ತುಂಬ ಕ್ರಿಯೇಟಿವ್. ನನಗೆ ಕ್ಯಾಮರಾ ಹಿಂದಿರುವುದಷ್ಟೇ ಇಷ್ಟ. ಕ್ಯಾಮರಾ ಮುಂದೆ ಖಂಡಿತಾ ಅಲ್ಲ. ಸಿನಿಮಾ ನನ್ನ ಜೀವನ. ಅದರ ಹೊರತಾಗಿ ನಾನಿರಲಾರೆ. ನಾನು ಬಹಳಷ್ಟು ಐಡಿಯಾಗಳನ್ನು ಅಪ್ಪನ ಜತೆಗೆ ಚರ್ಚೆ ಮಾಡಿದ್ದೇನೆ. ಅಪ್ಪ ನನಗೊಬ್ಬ ಗೈಡ್. ಆದರೂ ಇನ್ನೂ ಯಾವುದನ್ನೂ ಫೈನಲೈಸ್ ಮಾಡಿಲ್ಲ. ಸದ್ಯಕ್ಕೆ ನನ್ನ ಪೂರ್ಣ ಆಸಕ್ತಿ ಕ್ಯಾಮರಾ ಹಿಂದಿನ ಕೆಲಸಗಳಿಗೆ ಹಾಗೂ ಗ್ರಾಫಿಕ್ಸ್‌ಗಳಿಗೆ ಮಾತ್ರ'' ಎನ್ನುತ್ತಾರೆ ಸೌಂದರ್ಯಾ.

ತಾನು ಮನೆಯ ಎರಡನೇ ಮಗಳಾಗಿದ್ದರಿಂದ ಸ್ವಲ್ಪ ಮುದ್ದು ಜಾಸ್ತಿ ಎನ್ನುವ ಸೌಂದರ್ಯಾ, ''ನಾನು ಅಪ್ಪನ ಮಗಳು. ಆದರೆ ಅಮ್ಮನ ಮುದ್ದು ಕೂಡಾ'' ಎನ್ನುತ್ತಾರೆ. ಬಿಡುವಿನ ವೇಳೆ ಏನು ಮಾಡುತ್ತೀರಿ? ಎಂದರೆ, ''ಶಾಪಿಂಗ್ ಮಾಡುತ್ತೇನೆ. ನಂತರ ಅಕ್ಕನ ಪುಟ್ಟ ಮಗಳು ಯಾತ್ರಾ ಜತೆಗೆ ಸಮಯ ಕಳೆಯುತ್ತೇನೆ. ಯಾತ್ರಾ ಜತೆಗಿರೋದೆಂದರೆ ನನಗೆ ತುಂಬಾ ಇಷ್ಟ'' ಎನ್ನುತ್ತಾರೆ.

Soundarya Rajnikanth
WD
ಸದ್ಯ ಸುಲ್ತಾನ್ ಚಿತ್ರೀಕರಣದಲ್ಲಿ ತುಂಬ ಬ್ಯುಸಿಯಾಗಿರುವ ಸೌಂದರ್ಯ, ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಅನುಭವವನ್ನೂ ಬಿಚ್ಚಿಡುತ್ತಾರೆ. ''ಮೊದಲ ಬಾರಿ ನಿರ್ದೇಶಿಸುತ್ತಿರುವುದಕ್ಕಿಂತಲೂ ಅದು ಅಪ್ಪ ನಟಿಸುವ ಚಿತ್ರವನ್ನು ನಿರ್ದೇಶಿಸುತ್ತಿದ್ದೇನೆ ಎಂಬುದೇ ತುಂಬ ಖುಷಿಯ ವಿಚಾರ ನನಗೆ. ಅಪ್ಪನ ಜತೆಗೆ ಕೆಲಸ ಮಾಡೋದೆಂದರೆ ನನಗೆ ತುಂಬ ಇಷ್ಟ. ಮೊದಲ ಸಲ ಅಪ್ಪನಿಗೆ 'ಆಕ್ಷನ್' ಹೇಳಲು ನಾಲಿಗೆ ತಡವರಿಸಿತು. ಆದರೂ ಅಪ್ಪ ಅದ್ಭುತವಾಗಿ ನಟಿಸಿದರು'' ಎಂದು ವಿವರಿಸುತ್ತಾರೆ. ಸದ್ಯಕ್ಕೆ ಚಿತ್ರ ಬಹುತೇಕ ಪೂರ್ಣಗೊಂಡಿದೆ.

ತಾನು ತುಂಬ ಆರೋಗ್ಯದ ಹಾಗೂ ಫಿಟ್‌ನೆಸ್ ಬಗ್ಗೆ ಕಾಳಜಿಯಿರುವ ಹುಡುಗಿ ಎನ್ನುವ ಸೌಂದರ್ಯಾಗೆ ಪಾರ್ಟಿ ಎಂದರೆ ಇಷ್ಟವಿಲ್ಲವಂತೆ. ಅಲ್ಲದೆ, ಪಿಜ್ಜಾ, ಬರ್ಗರ್ ತಿನ್ನೋದೇ ಪ್ರತಿಷ್ಠೆಯ ವಿಚಾರವೆಂದು ಇತ್ತೀಚೆಗೆ ಬಿಂಬಿತವಾಗುತ್ತಿದೆ. ಇದು ತುಂಬ ಬೇಸರದ ವಿಚಾರ ಎಂದೂ ಹೇಳುತ್ತಾರೆ. ಪಿಜ್ಜಾ ತಿನ್ನುವವರು ನಿಮ್ಮನ್ನು 'ಇಡ್ಲಿ ದೋಸೆ' ಎಂದು ತಮಾಷೆ ಮಾಡಿದರೆ ಎಂದಿಗೂ ಬೇಸರ ಮಾಡಬೇಡಿ, ಅಥವಾ ಕೀಳರಿಮೆ ಬೆಳೆಸಬೇಡಿ. ಇಡ್ಲಿ ದೋಸೆ ಎಂದು ಅಡ್ಡ ಹೆಸರಿಟ್ಟರೆ ಅದನ್ನು ನೀವು ತುಂಬ ಪ್ರೀತಿಯಿಂದ ಸ್ವೀಕರಿಸಿ. ಹೆಮ್ಮೆಪಡಿ. ನನಗಂತೂ ಇಡ್ಲಿ ದೋಸೆಯೇ ಇಷ್ಟ ಎನ್ನುತ್ತಾರೆ ಈ ಸೌಂದರ್ಯದ ಖನಿ ಸೌಂದರ್ಯಾ.

ಅಪ್ಪ ರಜನೀಕಾಂತ್ ಯಾವಾಗಲೂ ಮಕ್ಕಳಿಗೆ ಏನು ಹೇಳುತ್ತಾರೆ ಎಂದರೆ, ಅಪ್ಪ ತನಗೆ ಹೇಳುತ್ತಿದ್ದ ಬುದ್ಧಿಮಾತುಗಳನ್ನು ನೆನಪಿಸುತ್ತಾರೆ ಸೌಂದರ್ಯಾ. 'ಯಾವತ್ತೂ ಹಿಂದಿನ ಬದುಕನ್ನು ಮರೆಯಬೇಡಿ. ಆದರೆ ಹಳೆಯ ನೆನಪಿನಲ್ಲೇ ಬದುಕಬೇಡಿ. ಭವಿಷ್ಯದ ಯೋಜನೆಗಳನ್ನು ರೂಪಿಸಿಕೊಳ್ಳಿ. ಆದರೆ ಭವಿಷ್ಯದ ಕನಸಿನಲ್ಲೇ ಬದುಕಬೇಡಿ. ವರ್ತಮಾನದಲ್ಲಿ ಬದುಕಿ.'- ಇದು ಯಾವಾಗಲೂ ನನಗೆ ಅಪ್ಪ ಹೇಳುತ್ತಿದ್ದ ಮಾತು. ನಾನು ಈ ಮಾತಿನಿಂದ ತುಂಬ ಪ್ರೇರಿತಳಾಗಿದ್ದೇನೆ ಎನ್ನುತ್ತಾರೆ ಸೌಂದರ್ಯಾ. ಜತಗೆ, 'ಸುಖ ಹಾಗೂ ದುಃಖ ಎರಡೂ ಕೂಡಾ ನಮ್ಮ ಎರಡು ಕಣ್ಣುಗಳಿದ್ದಂತೆ. ಎರಡನ್ನೂ ಒಂದೇ ಸಮನಾಗಿ ಸ್ವೀಕರಿಸಿ. ಹಿರಿಯರಿಗೆ ಉತ್ತಮ ಸೇವೆ ಮಾಡಿ. ಕನಿಷ್ಟ ಪಕ್ಷ ಸೇವೆ ಮಾಡಲಾಗದಿದ್ದರೂ, ಅವರಿಗೆ ಬೇಸರ ಮಾಡಬೇಡಿ. ಎಷ್ಟು ಸಾಧ್ಯವೋ ಅಷ್ಟಾದರೂ ಸ್ವಾರ್ಥಿಯಾಗದೆ ಇರಲು ಪ್ರಯತ್ನಿಸಿ.'- ಇವೆಲ್ಲ ಅಪ್ಪ ನನಗೆ ಸದಾ ಹೇಳುತ್ತಿದ್ದ ಮಾತು. ಇದು ನನ್ನಂತಿರುವ ಎಲ್ಲರಿಗೂ ಅನ್ವಯಿಸುತ್ತದೆ ಎನ್ನುತ್ತಾರೆ ಸೌಂದರ್ಯ.

ಅಂದಹಾಗೆ, ಅಪ್ಪ ರಜನೀಕಾಂತ್ ನಟಿಸಿರುವ ಸೌಂದರ್ಯಾ ರಜನೀಕಾಂತ್ ನಿರ್ದೇಶನದ ಸುಲ್ತಾನ್ ದಿ ವಾರಿಯರ್ ಚಿತ್ರ ತಮಿಳು, ತೆಲುಗು, ಹಿಂದಿ ಹಾಗೂ ಜಪಾನಿ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆಯಂತೆ. ಆಮೇಲೆ ಕನ್ನಡ, ತೆಲುಗಿನತ್ತ ದೃಷ್ಟಿ ಹರಿಸಲಿದ್ದಾರಂತೆ ಸೌಂದರ್ಯಾ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಜನೀಕಾಂತ್, ಸೌಂದರ್ಯ ರಜನೀಕಾಂತ್, ಕನ್ನಡ ಸಿನಿಮಾ, ಸುಲ್ತಾನ್ ದಿ ವಾರಿಯರ್