ನಿರ್ದೇಶಕ ಓಂ ಪ್ರಕಾಶ್ ರಾವ್ ಮತ್ತೆ ಗಾಂಧಿನಗರದಲ್ಲಿ ಸದ್ದುಮಾಡಿದ್ದಾರೆ. ಈ ಬಾರಿ ಎರಡು ತೆಲುಗು ಚಿತ್ರಗಳು ಸೇರಿದಂತೆ ಐದಾರು ಕನ್ನಡ ಚಿತ್ರಗಳನ್ನು ಹಿಡಿದುಕೊಂಡು ಬರುವ ಮೂಲಕ ಮೂರು ವರ್ಷ ಗಾಂಧಿನಗರದಲ್ಲೇ ಮೊಕ್ಕಾಂ ಹೂಡಲು ನಿರ್ಧರಿಸಿದ್ದಾರೆ.
ಕಿರಣ್ ಬೇಡಿಯಂತಹ ಸುದೀರ್ಘ ಚಿತ್ರದ ಬಳಿಕ ಸದ್ದಿಲ್ಲದೆ ಯೋಧ ಮುಗಿಸಿದ ಓಂ ಪ್ರಕಾಶ್, ಇದೀಗ ಎಕೆ-56 ಹಿಡಿದಿದ್ದಾರೆ. ಹೌದು. ಈ ಹೆಸರಿನ ಚಿತ್ರದ ತಯಾರಿಯಲ್ಲಿದ್ದಾರೆ. ಮಿಲಿಟರಿ ಶಸ್ತ್ರಾಸ್ತ್ರಗಳ ಅವ್ಯವಹಾರದ ಕತೆ ಎಂಬ ಸುಳಿವು ನೀಡುತ್ತಾರೆ ಅವರು. ಮದ್ದೂರು ಬಳಿಯ ಪುಟ್ಟ ಗ್ರಾಮವೊಂದರಲ್ಲಿ ಬಹುಪಾಲು ಚಿತ್ರೀಕರಣ ನಡೆಯಲಿದೆ ಎಂದು ವಿವರಿಸಿದರು ಓಂ ಪ್ರಕಾಶ್.
ಮಿಂಚು ಚಿತ್ರದಲ್ಲಿ ನಟಿಸಿದ್ದ ಸಿದ್ದಾಂತ್ ನಾಯಕ. ನಾಯಕಿಯಾಗಿ ಯೋಧ ಚಿತ್ರದಲ್ಲಿ ನಟಿಸಿದ್ದ ನಿಖಿತಾ ಆಯ್ಕೆಯಾಗಿದ್ದಾರೆ. ಈ ಮೊದಲು ಓಂ ಪ್ರಕಾಶ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಈ ನಟಿ ಮತ್ತೆ ಅವರ ಚಿತ್ರಕ್ಕೆ ನಾಯಕಿಯಾಗಿರುವ ಬಗ್ಗೆ ಗಾಂಧಿನಗರ ಗುಸುಗುಸು ಮಾತನಾಡಿಕೊಳ್ಳುತ್ತಿದೆ.
ಈ ಚಿತ್ರದ ಬಳಿಕ ಓಂ ಪ್ರಕಾಶ್ ಶಿವರಾಜ್ಕುಮಾರ್ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ. ಚಿತ್ರಕ್ಕಿನ್ನು ಹೆಸರಿಟ್ಟಿಲ್ಲ. ಬಳಿಕ ವಿಜಯ್ ಚಿತ್ರ. ಇದಾದ ಮೇಲೆ ದರ್ಶನ್ಗಾಗಿ ಮೂರು ಚಿತ್ರ ಮಾಡಲಿದ್ದಾರೆ ಓಂ ಪ್ರಕಾಶ್. ಅಂತೂ ಚಿತ್ರಗಳ ಸುರಿಮಳೆಯನ್ನೇ ಸುರಿಸಲಿದ್ದಾರೆ. ಪ್ರೇಕ್ಷಕನ ಪಾಲಿಗೆ ಇದು ಬಿರುಗಾಳಿಯಾಗುತ್ತಾ, ಸುಂದರ ಸಂಜೆ ಮಳೆಯಾಗುತ್ತಾ.. ಕಾಯಬೇಕು.