ನಿರ್ದೇಶಕ ರತ್ನಜ ಅವರ 'ಪ್ರೇಮಿಸಂ' ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು ಶೀಘ್ರವೇ ತೆರೆಗೆ ತರಲು ಯೋಚಿಸಿದ್ದಾರೆ. ಚಿತ್ರೀಕರಣ ಕೂಡ ಭರದಿಂದಲೇ ಸಾಗುತ್ತಿದೆಯಂತೆ.
ಚಿತ್ರದ ಇಬ್ಬರು ನಾಯಕರಾದ ವರುಣ್ ಮತ್ತು ಚೇತನ್ ಚಂದ್ರರಿಗೆ ನಾಯಕಿಯಾಗಿ ಅಮೂಲ್ಯ ಕಾಣಿಸಿಕೊಂಡಿರುವುದು ಗೊತ್ತೇ ಇದೆ. ನಾಯಕರೊಂದಿಗೆ ನಾಯಕಿ ಇದೀಗ ದೂರದ ಜಲಪಾತವೊಂದರಲ್ಲಿ ತೋಯ್ದು ಬಂದ ಫ್ರೆಶ್ ಸುದ್ದಿ ಬಂದಿದೆ.
MOKSHA
ಇತ್ತೀಚೆಗಷ್ಟೇ ಛತ್ತಿಸ್ಗಢದ ನಕ್ಸಲ್ ಪೀಡಿತ ಪ್ರದೇಶದಲ್ಲಿನ ಜಲಪಾತವೊಂದರಲ್ಲಿ ಹಾಡಿನ ಚಿತ್ರೀಕರಣ ಮುಗಿಸಿ ಬಂದಿದೆ ಚಿತ್ರತಂಡ. ಇದುವರೆಗೆ ಈ ಸ್ಥಳದಲ್ಲಿ ಯಾರೊಬ್ಬರೂ ಹೋಗಿ ಶೂಟ್ ಮಾಡಿ ಬಂದಿಲ್ಲ. ಅಂತಹ ಸ್ಥಳದಲ್ಲಿ ಚಿತ್ರೀಕರಣ ಮುಗಿಸಿರುವುದನ್ನು ಹೆಮ್ಮೆಯಿಂದ ಹೇಳಿಕೊಂಡರು ನಿರ್ದೇಶಕರು.
ಚಿತ್ರದಲ್ಲಿರುವ ಐದು ಹಾಡುಗಳನ್ನು ಹಂಸಲೇಖ ಬರೆದು ಅದಕ್ಕೆ ತಕ್ಕಂತೆ ಟ್ಯೂನ್ ಹಾಕಿದ್ದಾರೆ. ಪಂಚಭೂತಗಳ ಪರಿಕಲ್ಪನೆಯನ್ನು ಪ್ರೀತಿಯ ಹಿನ್ನೆಲೆಯಲ್ಲಿ ತೋರಿಸುವ ನಿರ್ದೇಶಕರ ಕಲ್ಪನಾ ಶಕ್ತಿಗೆ ತಕ್ಕಂತೆ ಇತ್ತೀಚೆಗೆ ನಗರದ ಅಬ್ಬಾಯಿನಾಯ್ಡು ಸ್ಟುಡಿಯೋದಲ್ಲಿ ಹಾಕಿದ ಸೆಟ್ನಲ್ಲಿ 'ಈ ಇಸಂ, ನಮ್ಮಿಸಂ, ಪ್ರೇಮಿಸಂ' ಹಾಡನ್ನು ಚಿತ್ರೀಕರಿಸಿಕೊಳ್ಳಲಾಯಿತು.
ಚಿತ್ರದ ಧ್ವನಿಸುರುಳಿಯನ್ನು ಸ್ವಾತಂತ್ರೋತ್ಸವಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿದ್ದರು ನಿರ್ದೇಶಕರು. ಆದರೆ ಬೆಳಗಾಂನಲ್ಲಿ ಅತಿಯಾದ ಮಳೆ ಬಂದ ಕಾರಣ ಚಿತ್ರೀಕರಣ ಪೂರ್ಣಗೊಂಡಿಲ್ಲ. ಎಲ್ಲವೂ ಅಂದುಕೊಂಡಂತೆ ಆದರೆ ಈ ತಿಂಗಳ ಅಂತ್ಯದಲ್ಲಿ ಧ್ವನಿಸುರುಳಿ ಬಿಡುಗಡೆಯಾಗಲಿದೆ.