ನಿರ್ದೇಶಕ ಎಚ್.ಬಿ. ರಾಮಮೂರ್ತಿಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು, ಕಾಮಿಡಿ ಸಿನಿಮಾಗಳೇ. ಇದೀಗ ಅಂತದ್ದೇ ಮತ್ತೊಂದು ರಿಮೇಕ್ ಚಿತ್ರವನ್ನು ಮಾಡುತ್ತಿದ್ದಾರೆ.
ಅದೇ 'ಹೇ ಸರಸೂ...' ಇತ್ತೀಚೆಗೆ ಈ ಚಿತ್ರದ ಧ್ವನಿಸುರುಳಿ ಬಿಡುಗಡೆಗೊಂಡಿದೆ. ಐದನೇ ಬಾರಿಗೆ ರಮೇಶ್ ಅರವಿಂದ್ ಮತ್ತು ರಾಮಮೂರ್ತಿ ಜೊತೆಗೂಡಿದ್ದಾರೆ. ಮೂವತ್ತು ದಿನಗಳಲ್ಲಿ ಚಿತ್ರೀಕರಣ ಮುಗಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು ನಿರ್ದೇಶಕರು. ಬಹಳ ಹಿಂದೆಯೇ ಈ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡುವ ಬಗ್ಗೆ ರಮೇಶ್ ಯೋಚಿಸಿದ್ದರಂತೆ. ಆದರೆ ಅದು ಸಾಧ್ಯವಾಗಿರಲಿಲ್ಲ. ಇದೀಗ ಆ ಚಿತ್ರದಲ್ಲಿ ನಟಿಸುವುದಕ್ಕೆ ಖುಷಿಯಾಗುತ್ತಿದೆ ಎನ್ನುತ್ತಾರೆ ರಮೇಶ್.
ಏನೋ ಮಾಡಲು ಹೋಗಿ ಮತ್ತೇನೋ ಆಗಿ, ಪೇಚಿಗೆ ಸಿಲುಕುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ರಮೇಶ್. ಚಿತ್ರದಲ್ಲಿ ಇಬ್ಬರು ನಾಯಕಿಯರು. ಸರಳ ಮತ್ತು ಸರಸ್ವತಿ ಎನ್ನುವ ಇಬ್ಬರೂ ಹುಡುಗಿಯರಲ್ಲಿ ಕೊನೆಗೆ ಯಾರೂ ಬೇಕಾದರೂ ಸರಸು ಆಗಬಹುದು ಎನ್ನುತ್ತಾರೆ ರಮೇಶ್.