ಲೂಸ್ ಮಾದ ಯೋಗೀಶ್ ಅಭಿನಯದ 'ಧೂಳ್' ಚಿತ್ರದ ಪ್ರಥಮ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರದಲ್ಲಿ ಚಿಗರೆ ಕಂಗಳ ಅಂದ್ರಿತಾ ರೇ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಹದಿಯರೆಯದ ಹುಡುಗ ಕಾಲೇಜಿನ ಮೊದಲ ದಿನವೇ ಕಂಡ ಹುಡುಗಿಗೆ ತನ್ನ ಪ್ರೀತಿಯ ಕುರಿತು ಹೇಳುತ್ತಾನೆ. ಹೇಗೆ ಪ್ರೀತಿಸುತ್ತಿಯೋ ನೋಡೇ ಬಿಡೋಣ ಎಂದು ಸವಾಲಾಗಿ ತೆಗೆದುಕೊಳ್ಳುತ್ತಾಳೆ ನಾಯಕಿ. ಇದನ್ನು ಇತ್ತೀಚೆಗೆ ಬಿ.ಜಿ.ಎಸ್ ಕಾಲೇಜಿನಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.
ಚಿತ್ರವನ್ನು ಧರಣಿ ನಿರ್ದೇಶಿಸುತ್ತಿದ್ದಾರೆ. ಇವರು ಖ್ಯಾತ ನಿರ್ದೇಶಕ ಎಮ್.ಎಸ್. ರಾಜಶೇಖರ್ ಪುತ್ರ. ತಂದೆಯ ಮಾರ್ಗದರ್ಶನದಲ್ಲಿ ಬೆಳೆದು ಇದೀಗ ಸ್ವಂತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಮೊದಲು ರಾಘವೇಂದ್ರ ಎಂಬ ಹೆಸರಿನಿಂದ ಪರಿಚಿತರಾಗಿದ್ದ ಇವರು ಈ ಚಿತ್ರದಿಂದ ಧರಣಿ ಎಂದು ಬದಲಿಸಿಕೊಂಡಿದ್ದಾರೆ.
ವಿ. ಹರಿಕೃಷ್ಣ ಸಂಗೀತ ಚಿತ್ರಕ್ಕಿದೆ. ಎಂ.ಎಚ್. ಸುನೀಲ್ ನಿರ್ಮಾಪಕರು. ಚಿತ್ರದಲ್ಲಿ ಪ್ರಕಾಶ್ ರೈ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗಿನ 'ಅಭಿಯುಂ ನಾನುಂ' ಎಂಬ ಚಿತ್ರವನ್ನು ಕನ್ನಡದಲ್ಲಿ ನಿರ್ದೇಶನ ಮಾಡುವ ಬಗ್ಗೆಯೂ ರೈ ಹೇಳಿಕೊಂಡಿದ್ದು, ಇದರಲ್ಲಿ ಮಗಳಾಗಿ ನಟಿ ರಮ್ಯಾ ಕಾಣಿಸಿಕೊಳ್ಳುತ್ತಿರುವುದು ವಿಶೇಷ.