ಆತ್ಮಹತ್ಯೆಗೂ ಯತ್ನಿಸಿದಳು ಎಂದೆಲ್ಲಾ ರೂಮರ್‌ಗಳಿಗೆ ಕಾರಣಳಾಗಿದ್ದ ರಂಭಾ ಇದೀಗ ರಾಖಿ ಒಡ್ಡೋಲಗ ಕಂಡು ತಾನೂ ಅದೇ ಹಾದಿಯಲ್ಲಿ ನಡೀತಾಳಂತೆ. ಮೂಲಗಳ ಪ್ರಕಾರ ತಮಿಳಿನ ಜನಪ್ರಿಯ ಚಾನೆಲ್ 'ರಂಭಾ ಕೀ ಸ್ವಯಂವರ' ಕಾರ್ಯಕ್ರಮವನ್ನು ನಡೆಸಲಿದೆ.
ಕಳೆದ ಹಲವಾರು ವರ್ಷಗಳಿಂದ ರಂಭಾಳಿಗೆ ಗಂಡು ಹುಡುಕಲು ಯತ್ನಿಸಿ ಸೋತು ಬಸವಳಿದಿರುವ ಆಕೆಯ ಹೆತ್ತವರೂ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ರಾಖಿಯಂತ ಐಟಂ ಹುಡುಗಿಗೇ ಕೆನಡಾ ನಿವಾಸಿ ಸಿಗಬೇಕಾದರೆ ನನಗ್ಯಾಕೆ ಸಿಗಲ್ಲ ಅನ್ನೋದು ರಂಭಾ ಹಕೀಕತ್ತು.
ರಾಖಿಯ ಕಾರಣದಿಂದಲೇ ಎನ್‌ಡಿಟೀವಿ ಇಮ್ಯಾಜಿನ್ ಚಾನೆಲ್‌ನ ಟಿಆರ್‌ಪಿ ರೇಟ್ ಗಗನಕ್ಕೇರಿತ್ತು. ಹಾಗಾಗಿ ಚಾನೆಲ್ ಕೂಡ ಲಾಭ ಮತ್ತು ಜನಪ್ರಿಯತೆಯ ಆಸೆಯಿಂದ ಆಕೆಯ ಷರತ್ತುಗಳಿಗೆ ಒಪ್ಪಿಗೆ ಸೂಚಿಸಿದೆ. ಬರುವ ಲಾಭದಲ್ಲಿ ಅರ್ಧವನ್ನು ತನಗೇ ಕೊಡಬೇಕು ಎನ್ನುವುದನ್ನು ಚಾನೆಲ್ ಮಂದಿಗೆ ರಂಭಾ ಮಾತುಕತೆಯ ಹಂತದಲ್ಲೇ ಸ್ಪಷ್ಟಪಡಿಸಿದ್ದಾಳಂತೆ.
ಹೇಗೂ ನಿರ್ದೇಶಕ, ನಿರ್ಮಾಪಕರಿಂದ ಬೇಡಿಕೆ ಬರದೆ ಆಕೆ ಸೊರಗುತ್ತಿದ್ದಾಳೆ. ಯಾವ ಚಿತ್ರಕ್ಕೂ ಆಕೆಯನ್ನೀಗ ನಾಯಕಿಯಾಗು ಅಂತ ಕರೆಯುತ್ತಿಲ್ಲ ಎಂದು ಕೊರಗುವುದರಲ್ಲಿ ಅರ್ಥವಿಲ್ಲ. ತನ್ನ ಓರಗೆಯವರೆಲ್ಲ (ಮೀನಾ, ರಮ್ಯಕೃಷ್ಣ) ಮದುವೆಯಾಗಿ ಸುಖವಾಗಿರುವಾಗ, ತಾನೂ ಭರ್ಜರಿ ಪ್ರಚಾರದೊಂದಿಗೆ ಮದುವೆಯಾದರೆ ತಪ್ಪೇನು ಎನ್ನುವುದು ರಂಭಾ ಯೋಚನೆಯಿರಬಹುದು.
WD
ಅಂದ ಹಾಗೆ ಈ ಮಾತುಕತೆಯನ್ನು ಚಾನೆಲ್ ಜತೆ ರಂಭಾ ನೇರವಾಗಿ ನಡೆಸಿಲ್ಲ. ಆಕೆಯ ಸಹೋದರ ವಾಸು ಮೂಲಕ ಸಮಾಲೋಚನೆ ನಡೆಸಲಾಗಿದೆ.
ಒಂದು ಕಾಲದಲ್ಲಿ ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ, ಬೆಂಗಾಲಿ ಮತ್ತು ಭೋಜಪುರಿ ಭಾಷೆಗಳಲ್ಲಿ ಚಂದಿರನ ತುಂಡಿನಂತೆ ಬೇಡಿಕೆ ಗಿಟ್ಟಿಸಿದ್ದ ಈಕೆಯತ್ತ ಈಗ ಯಾರೂ ಗಮನ ಹರಿಸುತ್ತಿಲ್ಲ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಜನಿಸಿದ ಈಕೆ ವಯಸ್ಸೂ 33 ದಾಟಿದೆ.
ಕಮಲಹಾಸನ್, ಚಿರಂಜೀವಿ, ರಜನಿಕಾಂತ್, ಶಿವರಾಜ್ ಕುಮಾರ್, ರವಿಚಂದ್ರನ್, ಜಗ್ಗೇಶ್, ಅನಿಲ್ ಕಪೂರ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವಗನ್, ಸುನಿಲ್ ಶೆಟ್ಟಿ ಮುಂತಾದ ಜನಪ್ರಿಯ ನಾಯಕ ನಟರ ಜತೆ ಮರ ಸುತ್ತಿದ್ದ ರಂಭಾ, ತೀರಾ ಯೌವ್ವನದ ಹೊತ್ತಿನಲ್ಲಿ 'ಬಿಚ್ಚಮ್ಮ'ಳೆಂದೇ ಖ್ಯಾತಿಯಾಗಿದ್ದವಳು. ಈಗ ಮಾತ್ರ ಐಟಂ ಹಾಡುಗಳಿಗೆ ಸೀಮಿತವಾಗುತ್ತಿದ್ದಾಳೆ.
ಕನ್ನಡದಲ್ಲಿ ಕೂಡ ಹಲವು ಸಿನಿಮಾಗಳಲ್ಲಿ ನಟಿಸಿದ್ದರೂ ಯಾವೊಂದು ಚಿತ್ರವೂ ಹಿಟ್ ಆಗದೇ ಇದ್ದದ್ದು ನಿರ್ಮಾಪಕರದ್ದೂ ದುರದೃಷ್ಟ. ಸರ್ವರ್ ಸೋಮಣ್ಣ, ಓ ಪ್ರೇಮವೇ, ಬಾವ ಭಾಮೈದ, ಸಾಹುಕಾರ, ಪಾಂಡುರಂಗ ವಿಠಲ, ಗಂಡುಗಲಿ ಕುಮಾರರಾಮ, ಅನಾಥರು ಮುಂತಾದ ಚಿತ್ರಗಳಲ್ಲಿ ನಾಯಕಿ, ಅತಿಥಿ ಪಾತ್ರಗಳಲ್ಲಿ ನಟಿಸಿದ್ದು ಬಹುತೇಕ ಎಲ್ಲರಿಗೂ ಮರೆತೇ ಹೋಗಿದೆ.
ಸಾಕಷ್ಟು ದೇವಸ್ಥಾನಗಳಿಗೆ ಸುತ್ತು ಹಾಕಿ, ಉರುಳು ಸೇವೆ ನಡೆಸಿದರೂ ಇದುವರೆಗೆ ಕಂಕಣ ಭಾಗ್ಯ ಕೂಡಿ ಬಂದಿಲ್ಲ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ. ಹಾಗಾಗಿ ಈ ಮೂಲಕವಾದರೂ ಆಕೆಗೆ ಗಂಡು ಸಿಗಲಿ ಎನ್ನವುದು ಅಭಿಮಾನಿಗಳೂ ಹಾರೈಸುತ್ತಿದ್ದಾರೆ.