ಪ್ರಕಾಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಗೋಕುಲ' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನಗರದ ಸುತ್ತಮುತ್ತಲ ಪ್ರದೇಶದಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಚಿತ್ರದ ಹೆಸರಿಗೆ ತಕ್ಕಂತೆ ಒಂದು ಹಳೆ ಕಾಲದ ಮನೆ, ಅಲ್ಲೊಂದು ಕೃಷ್ಣನ ವಿಗ್ರಹ, ಸುತ್ತಲೂ ಗಿಡ ಮರಗಳಿಂದ ಕೂಡಿರುವ ಜಾಗಕ್ಕಾಗಿ ಪ್ರಕಾಶ್ ಹುಡುಕಾಟ ನಡೆಸಿದ್ದರು. ಇತ್ತೀಚೆಗೆ ಮಿಲ್ಕ್ ಕಾಲೋನಿಯಲ್ಲಿ ಅನಾಥ ಹುಡುಗರ ರೂಮಿನ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗಿದೆ. ಕತೆ, ಚಿತ್ರಕತೆ ಬರೆದಿರುವ ಪ್ರಕಾಶ್ ನಿರ್ದೇಶನವನ್ನೂ ಮಾಡುತ್ತಿದ್ದಾರೆ.
ಚಿತ್ರದಲ್ಲಿ ನಾಲ್ವರು ನಾಯಕ-ನಾಯಕಿಯರಿದ್ದಾರೆ. ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿ ಹಾಗೂ ನಕ್ಷತ್ರ ನಾಯಕಿಯರು. ವಿಜಯ ರಾಘವೇಂದ್ರ ಮತ್ತು ಭರವಸೆಯ ನಟ ಯಶ್ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊಗ್ಗಿನ ಮನಸು ಚಿತ್ರದ ಬಳಿಕ ಯಶ್‌ಗೆ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಬಂದಿದೆ. ಈ ಚಿತ್ರದ ಮೂಲಕ ತಮ್ಮ ಇಮೇಜನ್ನು ಇನ್ನೂ ಹೆಚ್ಚಿಸುವ ಪ್ರಯತ್ನದಲ್ಲಿದ್ದಾರೆ ಯಶ್.
ಈ ತಾರಾಗಣದಲ್ಲಿರುವ ಪೂಜಾಗಾಂಧಿ ಮತ್ತು ವಿಜಯ್ ರಾಘವೇಂದ್ರ ಕಳೆದ ಹಲವಾರು ತಿಂಗಳುಗಳಿಂದ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದರೂ, ನಿರೀಕ್ಷೆಯ ಗೆಲುವು ಕಂಡಿಲ್ಲದಿರುವುದರಿಂದ ಸಮಾನ ದುಃಖಿಗಳು. ಇಬ್ಬರಿಗೂ ಗೆಲುವು ಅನಿವಾರ್ಯ.
ಖುಷಿ, ರಿಷಿ, ಶ್ರೀ, ಮಿಲನ, ವಂಶಿಯಂತಹ ಚಿತ್ರಗಳನ್ನು ನೀಡಿ ಕೌಟುಂಬಿಕ ಪ್ರೇಕ್ಷಕರನ್ನು ಸೆಳೆಯಲು ಸಫಲವಾಗಿರುವ ಪ್ರಕಾಶ್‌ಗೆ ಕೂಡ ಈ ಚಿತ್ರ ಗೆಲ್ಲುವುದು ಅಗತ್ಯ. ಈ ಹಿಂದೆ ಖುಷಿ, ರಿಷಿ ಮತ್ತು ಶ್ರೀ ಚಿತ್ರಗಳಲ್ಲಿ ವಿಜಯ ರಾಘವೇಂದ್ರರನ್ನು ಹಾಕಿಕೊಂಡಿದ್ದರೂ ಬಾಕ್ಸ್ ಆಫೀಸಿನಲ್ಲಿ ಭಾರೀ ಸದ್ದು ಮಾಡಿರಲಿಲ್ಲ. ಪುನೀತ್ ರಾಜ್‌ಕುಮಾರ್ ಜತೆಗಿನ ಇತ್ತೀಚಿನ ಚಿತ್ರ ವಂಶಿ ಕೂಡ ಸಾಕಷ್ಟು ಟೀಕೆಯನ್ನೆದುರಿಸಿತ್ತು. ಹಾಗಾಗಿ 'ಗೋಕುಲ' ಪ್ರಕಾಶ್‌ಗೆ ಅಗ್ನಿಪರೀಕ್ಷೆ.
ಚಿತ್ರಕ್ಕೆ ಜಯಂತ್ ಕಾಯ್ಕಿಣಿ ಹಾಗೂ ಧನಂಜಯ ಸಾಹಿತ್ಯ ಬರೆದಿದ್ದಾರೆ. ಸಂಗೀತ ಸಂಯೋಜನೆ ಮೆಲೋಡಿಯಸ್‌ಗೆ ಹೆಸರಾದ ಮನೋಮೂರ್ತಿಯವರದ್ದು.