ಬರಹಗಳಲ್ಲಿ ಯಾವತ್ತೂ ಪ್ರೇಮ ಪಲ್ಲವಿಗಳನ್ನೇ ಹರಿಸುವ ಹಿರಿಯ ಪತ್ರಕರ್ತ, ಲೇಖಕ ರವಿ ಬೆಳೆಗರೆ ದೇವದಾಸನಾಗಲಿದ್ದಾರೆ. ಆಶ್ಚರ್ಯ ಪಡಬೇಕಾಗಿಲ್ಲ. ಹಲವು ಸಮಯದ ನಂತರ ಅವರು ಮತ್ತೆ ಬಣ್ಣ ಹಚ್ಚುತ್ತಿದ್ದಾರಷ್ಟೆ.
ಬಿ.ಪಿ. ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಹರಿಶ್ಚಂದ್ರ ಘಾಟ್' ಚಿತ್ರದಲ್ಲಿ ದೇವದಾಸ್ ಪಾತ್ರದಲ್ಲಿ ಬೆಳಗೆರೆ ಕಾಣಿಸಿಕೊಳ್ಳುತ್ತಿದ್ದಾರೆ.
MOKSHA
ತನ್ನ ಮುದ್ದು ಮಡದಿಯನ್ನು ಕಳೆದುಕೊಂಡ ನೋವಲ್ಲಿ ಆತ ದೇವದಾಸನಾಗುತ್ತಾನೆ. ತನ್ನ ಹೆಂಡತಿ ಮರಳಿ ಬರಬಹುದು ಎಂಬ ಆಸೆಯಿಂದ ಹರಿಶ್ಚಂದ್ರ ಘಾಟ್ನಲ್ಲಿ ಬೀಡು ಬಿಟ್ಟಿರುತ್ತಾನೆ. ಈ ಪಾತ್ರಕ್ಕೆ ರವಿಬೆಳೆಗರೆಯೇ ಸೂಕ್ತ ಎಂದು ನಿರ್ದೇಶಕರು ಕರೆದುಕೊಂಡು ಕೂರಿಸಿದ್ದಾರೆ.
ಅಂದ ಹಾಗೆ ಈ ಚಿತ್ರದ ನಾಯಕ ನಟ ಅರ್ಜುನ್. 'ಗಂಗಾ ಕಾವೇರಿ' ಎಂಬ ಬಂದು ಹೋದ ಚಿತ್ರದಲ್ಲಿ ಈತ ನಾಯಕನಾಗಿದ್ದ. ಗಂಡ ಹೆಂಡತಿ, ವಾರಸ್ದಾರ, ಮಾದೇಶ ಚಿತ್ರಗಳಲ್ಲಿ ತನ್ನ ನಟನಾ ಕೌಶಲ್ಯವನ್ನು ಒರೆಗೆ ಹಚ್ಚಿ ಮರೆಗೆ ಸರಿದಿದ್ದ ಬೆಳಗೆರೆಯನ್ನು ಬೆಳ್ಳಿ ಪರದೆಯತ್ತ ಕರೆ ತರುವಲ್ಲಿ ಶ್ರೀನಿವಾಸ್ ಯಶಸ್ವಿಯಾಗಿದ್ದಾರೆ.
ಚಿತ್ರದಲ್ಲಿ ನಿರ್ದೇಶಕರ ಮಗಳಾದ ಶಾಲಿನಿ ನಾಯಕಿಯಾಗಿ ನಟಿಸುತ್ತಿದ್ದಾರೆ. 'ಮುಸ್ಸಂಜೆಯ ಗೆಳತಿ'ಯಲ್ಲಿ ತಂದೆಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದ ಶಾಲಿನಿಗಾಗಿ ಶ್ರೀನಿವಾಸ್ ಮತ್ತೊಂದು ಚಿತ್ರ ನಿರ್ದೇಶಿಸುತ್ತಿದ್ದಾರೆ. ಚಿತ್ರೀಕರಣ ಶೀಘ್ರದಲ್ಲಿ ಪ್ರಾರಂಭಿಸಲು ಯೋಜಿಸಿದ್ದಾರೆ ನಿರ್ದೇಶಕರು.