ಮಾಧ್ಯಮಗಳ ಕಟು ವಿಮರ್ಶೆಗಳ ಹೊರತಾಗಿಯೂ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವ 'ರಾಜ್ ದಿ ಶೋಮ್ಯಾನ್' ಬಿಡುಗಡೆಯಾದ ನಂತರ ಇದೀಗ ನಿರ್ದೇಶಕರೂ ಸುದ್ದಿಯಾಗುತ್ತಿದ್ದಾರೆ. ಚಿತ್ರದ ಬಗ್ಗೆ ಪ್ರೇಕ್ಷಕರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದರೂ, ಗಾಂಧಿನಗರದ ಮಂದಿ ಬೆನ್ನು ತಟ್ಟಲಿಲ್ಲ ಎಂಬುದು ಪ್ರೇಮ್ ಅಸಮಾಧಾನ.
MOKSHA
ಕನ್ನಡದಲ್ಲಿ ಇನ್ನು ಒಂದು ಚಿತ್ರ ನಿರ್ದೇಶನ ಮಾಡಿ ಗಾಂಧಿನಗರಕ್ಕೆ ಗುಡ್ ಬೈ ಹೇಳಲು ಅವರು ಬಯಸಿದ್ದಾರಂತೆ. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಕನ್ನಡದ ಹೊರತಾದ ಸಿನಿಮಾ ಮಾಡಲು ನಿರ್ಧರಿಸಿದ್ದೇನೆ ಎಂದು ಕನ್ನಡ ಚಿತ್ರರಂಗದ ಬಗ್ಗೆ ಗರಂ ಆಗಿ ಮಾತನಾಡಿದ್ದಾರೆ ಪ್ರೇಮ್. ಯಾವ ಭಾಷೆಯತ್ತ ಹೊರಳುತ್ತಾರೆಂಬುದನ್ನು ಬಹಿರಂಗಪಡಿಸಿಲ್ಲ.
ಈ ನಡುವೆ 'ರಾಜ್' ಚಿತ್ರ ಬಿಡುಗಡೆಯಾದ ನಂತರ ಹಲವು ನಿರ್ಮಾಪಕರು ಇವರ ಹಿಂದೆ ಬಿದ್ದಿದ್ದಾರೆ ಎಂಬ ಊಹಾಪೋಹಗಳು ಗಾಂಧಿನಗರದಲ್ಲಿ ಗುಲ್ಲೆಬ್ಬಿಸಿದೆ. ಪ್ರೇಮ್-ಪುನೀತ್ ರಾಜ್ಕುಮಾರ್ ಕಾಂಬಿನೇಷನ್ನಲ್ಲಿ ಇನ್ನೊಂದು ಚಿತ್ರ ಬರಬೇಕೆನ್ನುವುದು ಹಲವರ ಆಸೆ. ಅದಕ್ಕೀಗ ಎದುರು ಸಿಕ್ಕಿರುವವರು ಸೌಂದರ್ಯ ಜಗದೀಶ್.
ಹೌದು, ಸೌಂದರ್ಯ ಜಗದೀಶ್ ನಿರ್ಮಾಣದ ಚಿತ್ರದಲ್ಲಿ ಪುನೀತ್-ಪ್ರೇಮ್ ಮತ್ತೆ ಒಂದಾಗಲಿದ್ದಾರೆ. ಮೂಲಗಳ ಪ್ರಕಾರ ಇದರ ಮುಹೂರ್ತವೇ 2010ರ ಜನವರಿಯಲ್ಲಿ. ಈ ಚಿತ್ರದ ಹೆಸರು, ನಾಯಕಿ, ಕಥೆ, ಸಂಗೀತ.. ಹೀಗೆ ಎಲ್ಲವೂ ಇನ್ನಷ್ಟೇ ತಿಳಿದು ಬರಬೇಕಿದೆ.