'ಮುಂಗಾರು ಮಳೆ' ಮೂಲಕ ಕ್ಯಾಮರಾಕ್ಕೊಂದು ಹೊಸ ಭಾಷ್ಯ ಬರೆದ ಛಾಯಾಗ್ರಾಹಕ ಕೃಷ್ಣ ಮತ್ತೊಮ್ಮೆ ಬೆನ್ನು ತಟ್ಟಿಸಿಕೊಂಡಿದ್ದಾರೆ. ಪ್ರೇಮ್ ನಿರ್ದೇಶನದ 'ರಾಜ್ ದಿ ಶೋಮ್ಯಾನ್' ಚಿತ್ರದಲ್ಲಿ ಅವರ ಕ್ಯಾಮೆರಾ ಕೈಚಳಕಕ್ಕೆ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗಿದೆ.
ಚಿತ್ರ ನೋಡಿದ ನಂತರ ಪ್ರೇಕ್ಷಕರು ಛಾಯಾಗ್ರಾಹಕರ ಕೆಲಸ ಮೆಚ್ಚಿ ಮಾತನಾಡುತ್ತಿದ್ದಾರೆ. ಈ ಚಿತ್ರ ನನ್ನ ಜೀವನದಲ್ಲೊಂದು ಮೈಲುಗಲ್ಲು ಎಂದು ಅಭಿಮಾನದಿಂದ ಹೇಳುತ್ತಾರೆ ಕೃಷ್ಣ.
'ಮುಂಗಾರು ಮಳೆ' ಬಳಿಕ 'ಗೆಳೆಯ' ಮತ್ತು 'ಹಾಗೇ ಸುಮ್ಮನೆ' ಚಿತ್ರದಲ್ಲಿ ವಿಶಿಷ್ಟ ರೀತಿಯಲ್ಲಿ ಕೃಷ್ಣ ಛಾಪು ಮೂಡಿಸಿದ್ದರು. ಆದರೂ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿರಲಿಲ್ಲ. ಈಗ ಸಂಪೂರ್ಣ ಕಮರ್ಷಿಯಲ್ 'ರಾಜ್'ನಿಂದ ಅವರಿಗೊಂದು ಒಳ್ಳೆಯ ಬ್ರೇಕ್ ಸಿಕ್ಕಿದೆ ಎಂದೇ ಹೇಳಲಾಗುತ್ತಿದೆ.
ಇವರ ಕೆಲಸದ ಬಗ್ಗೆ ಸ್ವತಃ ನಿರ್ದೇಶಕ ಪ್ರೇಮ್ ಖುಷಿಯಾಗಿದ್ದಾರೆ. ತನ್ನ ಮುಂದಿನ ಚಿತ್ರದಲ್ಲಿ ಮತ್ತೊಮ್ಮೆ ಕೃಷ್ಣ ಕೆಲಸ ಮಾಡಲಿದ್ದಾರೆ ಎಂಬ ಸೂಚನೆ ಕೂಡ ನೀಡಿದ್ದಾರೆ ಪ್ರೇಮ್.
ಈಗಾಗಲೇ ಪಕ್ಕದ ತೆಲುಗು, ತಮಿಳು ಚಿತ್ರರಂಗದಿಂದ ಕರೆ ಬಂದಿದೆ ಎನ್ನುವ ಕೃಷ್ಣರಿಗೆ, ಈಗ ಜವಾಬ್ದಾರಿಯೂ ಹೆಚ್ಚಿದೆಯಂತೆ. ಏನೇ ಇರಲಿ, ಕನ್ನಡದಲ್ಲಿ ಛಾಯಾಗ್ರಾಹಕರಿಗೂ ಗೌರವಯುತ ಸ್ಥಾನವಿದೆ ಎಂಬುದನ್ನು ಕೃಷ್ಣ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ.