ಪ್ರಿಯಾ ಹಾಸನ್ ನಿರ್ದೇಶನ ಮತ್ತು ನಾಯಕಿಯ ಜವಾಬ್ದಾರಿಯನ್ನು ಹೊತ್ತುಕೊಂಡಿರುವ 'ಬಿಂದಾಸ್ ಹುಡುಗಿ' ಚಿತ್ರದ ಚಿತ್ರೀಕರಣ ಅಂತಿಮಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯವೂ ಪೂರ್ಣಗೊಂಡಿದೆ.
ಎರಡು ವರ್ಷದ ಹಿಂದೆ ಇವರು ನಟಿಸಿ ನಿರ್ದೇಶಿಸಿದ್ದ 'ಜಂಭದ ಹುಡುಗಿ' ಚಿತ್ರಕ್ಕಾಗಿ ಕನ್ನಡ ಚಲನಚಿತ್ರ ನಿರ್ದೇಶಕರ ಮಂಡಳಿಯಿಂದ ಪ್ರಶಸ್ತಿ ಪಡೆದಿದ್ದರು. ಚಿತ್ರ ಹಾಗೂ ಹೀಗೂ 100 ದಿನ ಪ್ರದರ್ಶನ ಕಂಡಿತ್ತು. ಇದೀಗ ಮತ್ತೊಮ್ಮೆ ನಿರ್ದೇಶನದ ಟೋಪಿ ತೊಟ್ಟಿರುವ ಪ್ರಿಯಾ, ಚಿತ್ರ ಪ್ರೇಕ್ಷಕರಿಗೆ ಖುಷಿಕೊಡಲಿದೆ ಎನ್ನುವ ಭರವಸೆಯಿಂದಿದ್ದಾರೆ.
ಮುಖ್ಯವಾಗಿ ಸಿನಿಮಾ ಮಕ್ಕಳಿಗೆ ಖುಷಿ ಕೊಡುವ ನಿಟ್ಟಿನಲ್ಲಿ ಚಿತ್ರಿಸಲಾಗಿದೆ. ಪೊಲೀಸ್ ಪಾತ್ರದಲ್ಲೂ ಕಾಣಿಸಿಕೊಂಡಿರುವುದರಿಂದ ಫ್ಯಾಮಿಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವುದರಲ್ಲಿ ಸಂಶಯವಿಲ್ಲ. ಸಾಕಷ್ಟು ಹೊಡೆದಾಟ, ಸಾಹಸಗಳನ್ನು ಕೂಡ ಮಾಡಿದ್ದೇನೆ ಎನ್ನುತ್ತಾರೆ ಪ್ರಿಯಾ.
'ಬಿಂದಾಸ್ ಹುಡುಗಿ'ಯ ನಿರ್ಮಾಪಕ ಪ್ರಿಯಾ ಸಹೋದರ ಮೋಹನ್ ಗೌಡ. ತಾರಾಗಣದಲ್ಲಿ ಡಾ. ಲೀಲಾವತಿ, ನಿನಾಸಂ ಅಶ್ವತ್ಥ್, ಶಂಕರ್ ಅಶ್ವತ್ಥ್, ಭವ್ಯ, ಸುರೇಶ್ ಮಂಗಳೂರು, ಮೋಹನ್ ಜುನೇಜಾ ಮುಂತಾದವರಿದ್ದಾರೆ. ನಗಿಸುವುದಕ್ಕಾಗಿ ಶರಣ್, ಮಿತ್ರ ಮತ್ತಿತರ ಹಾಸ್ಯ ನಟರು ಇದ್ದಾರೆ.
ಇಂದ್ರ ರಮೇಶ್ ಸಂಗೀತವಿರುವ ಈ ಚಿತ್ರವನ್ನು ಶೀಘ್ರದಲ್ಲಿ ತೆರೆಗೆ ತರಲು ಯೋಜಿಸಿದ್ದಾರೆ ಪ್ರಿಯಾ.