'ಸರ್ಕಸ್' ಸಿನಿಮಾ ಬಿಡುಗಡೆಯಾಗುವುದಕ್ಕೂ ಮೊದಲು ಈ ಚಿತ್ರದ ರಿಮೇಕ್ ಹಕ್ಕುಗಳನ್ನು ಸೂಪರ್‌ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯ ಖರೀದಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಅದೀಗ ನಿಜವಾಗಿದೆ. ಮೂಲಗಳ ಪ್ರಕಾರ ಇದರ ನಾಯಕ ಧನುಷ್.
ಇತ್ತೀಚೆಗಷ್ಟೇ ಸರ್ಕಸ್ ಚಿತ್ರವನ್ನು ನೋಡಿದ್ದ ಸೌಂದರ್ಯ ರಜನಿಕಾಂತ್, ಕಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದೇ ಕಾರಣಕ್ಕಾಗಿ ಅವರು ರಿಮೇಕ್ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
PR
ಸ್ವತಃ ತನ್ನ ಸಹೋದರಿಯ ಗಂಡನಾಗಿರುವ ಧನುಷ್ ಇದರಲ್ಲಿ ನಾಯಕನಾಗಿ ನಟಿಸುವುದು ಬಹುತೇಕ ಖಚಿತ. ಉಳಿದ ತಾರಾಗಣ ಆಯ್ಕೆ ಸದ್ಯಕ್ಕೆ ರಹಸ್ಯ. ಏಕೆಂದರೆ ಅವರು ಬಹುನಿರೀಕ್ಷಿತ 'ಸುಲ್ತಾನ್, ದಿ ವಾರಿಯರ್' ಮತ್ತು 'ಗೋವಾ' ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
ಕನ್ನಡ 'ಸರ್ಕಸ್'ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕ ಹಾಗೂ ಅರ್ಚನಾ ಗುಪ್ತಾ ನಾಯಕಿಯಾಗಿದ್ದರು. ಅವಿನಾಶ್, ಗುರುದತ್, ಸಾಧು ಕೋಕಿಲಾ, ರೇಖಾದಾಸ್ ಮುಂತಾದವರನ್ನೊಳಗೊಂಡಿದ್ದ ಇದರ ನಿರ್ದೇಶಕ ಹಾಗೂ ನಿರ್ಮಾಪಕ ದಯಾಳ್ ಪದ್ಮನಾಭನ್.
ಮತ್ತೊಬ್ಬ ಅನುಭವಿ ನಿರ್ದೇಶಕ ಹಾಗೂ ದಯಾಳ್ ಗುರುವಾಗಿದ್ದ ಮಹೇಂದರ್‌ರವರ ಕಥೆಯನ್ನು ಕದ್ದ ಪ್ರಕರಣದಿಂದಾಗಿ ವಿವಾದ ಕೂಡ ಉಂಟಾಗಿತ್ತು. ಸೋಲೊಪ್ಪಿಕೊಂಡಿದ್ದ ದಯಾಳ್, ಮಹೇಂದರ್‌ಗೆ ಪರಿಹಾರ ಕೂಡ ನೀಡಿದ್ದರು.
ಐವರು ಗೆಳೆಯರ ರೈಲು ಪ್ರಯಾಣದ ಭಿನ್ನ ಕಥೆಯನ್ನೊಳಗೊಂಡ ಚಿತ್ರ ಸರ್ಕಸ್. ಪ್ರತಿ ದಿನ ನಿಗದಿತ ಸಮಯಕ್ಕೆ ಹಾಜರಾಗುವ ರೈಲಿನ ದಿನಚರಿಯನ್ನು ಬದಲಿಸಬೇಕೆಂದು ಯೋಚಿಸುವ ಐವರು ಪಡ್ಡೆಗಳು, ರೈಲಿನಲ್ಲಿ ಬಾಂಬ್ ಇಡಲಾಗಿದೆ ಎಂದು ರೈಲ್ವೇ ಮಾಸ್ಟರ್‌ಗೆ ಪತ್ರ ಬರೆಯುತ್ತಾರೆ.
ದುರದೃಷ್ಟವೆಂದರೆ ಆ ಪತ್ರದ ಹಿಂದೆ ನಾಯಕನ ಹೆಸರಿದ್ದದ್ದು ಮತ್ತು ನಿಜವಾಗಿಯೂ ಆ ರೈಲಿನಲ್ಲಿ ಭಯೋತ್ಪಾದಕರು ಬಾಂಬ್ ಇರಿಸಿದ್ದು. ಇದನ್ನು ತಪ್ಪಿಸಲು ಐವರು ಯುವಕರು ಹೋರಾಡುವ ಕಥೆಯೇ ಸರ್ಕಸ್. ಇಷ್ಟೆಲ್ಲ ಹೊಸತನವಿದ್ದ ಹೊರತಾಗಿಯೂ ಕನ್ನಡದಲ್ಲಿ ಭಾರೀ ಯಶಸ್ಸನ್ನು ಕಾಣಲು ಸಾಧ್ಯವಾಗಿರಲಿಲ್ಲ.
ಭಿನ್ನ ಕಥೆಯನ್ನು ಹೊಂದಿದ್ದ ಕಾರಣಕ್ಕಾಗಿ ರಿಮೇಕ್ ಆಗಲಿರುವ ಚಿತ್ರ ತಮಿಳರ ನಾಡಿನಲ್ಲಿ ಯಾವ ಕ್ರೇಜ್ ಹುಟ್ಟಿಸಲಿದೆ ಎಂಬುದನ್ನು ಕಾದು ನೋಡಬೇಕು.