ತೆಲುಗು ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ನನ್ನ ಮಾಜಿ ಬಾಯ್‌ಫ್ರೆಂಡ್ ಅಲ್ಲ ಎಂದು ರಮ್ಯಾ ಘಂಟಾಘೋಷವಾಗಿ ಸಾರಿದ್ದಾರೆ. ಹಲವು ಸಮಯಗಳಿಂದ ಇವರಿಬ್ಬರ ನಡುವೆ ಏನೋ ಇದೆ ಎಂದು ಹುಡುಕುತ್ತಿದ್ದವರಿಗೆ ನೇರ ಉತ್ತರ ಸಿಕ್ಕಿದೆ.
ಅವರಿಬ್ಬರಿಗೆ ಮದುವೆಯೂ ಆಗಿದೆ ಎಂದೆಲ್ಲ ವಿವಾದವಾಗಿದ್ದಾಗ ಚರಣ್ ಸ್ಪಷ್ಟನೆ ನೀಡಿ, ಅದೆಲ್ಲ ಸುಳ್ಳು. ನಾವಿಬ್ಬರೂ ಕೇವಲ ಫ್ರೆಂಡ್ಸ್ ಮಾತ್ರ. ಹಾಗೂ ಯಾರನ್ನಾದರೂ ಮದುವೆಯಾಗುವುದಿದ್ದರೆ ಅದರಲ್ಲಿ ಗುಟ್ಟು ಮಾಡುವುದು ಏನಿದೆ ಎಂದು ತಿರುಗಿ ಬಿದ್ದಿದ್ದರು.
ಅಂತಹ ಊಹಾಪೋಹಗಳಿಗೆ ಮತ್ತೆ ಜೀವ ಬಂದದ್ದು ಮೊನ್ನೆ ಹೈದರಾಬಾದ್‌ನಲ್ಲಿ ಫಿಲ್ಮ್‌ಫೇರ್ ಅವಾರ್ಡ್ ಸಮಾರಂಭದಲ್ಲಿ. ಅದೇ ರಾಮ್ ಚರಣ್ ತೇಜ ಹಿಂದೆ ಕೂತಿದ್ದ ರಮ್ಯಾ ಎಲ್ಲರ ಗಮನವನ್ನು ಸೆಳೆದಿದ್ದರು.
ಇತ್ತೀಚೆಗೆ ಮಾತಿಗೆ ಸಿಕ್ಕಾಗ 'ಚರಣ್ ನಿಮ್ಮ ಮಾಜಿಯೇ?' ಎಂದು ಪ್ರಶ್ನಿಸಿದ್ದಕ್ಕೆ ಹುಸಿ ಮುನಿಸು ತೋರಿಸಿರುವ ರಮ್ಯಾ, 'ಇಲ್ಲಿ ಮಾಜಿಯೆಂಬ ಪ್ರಶ್ನೆಯೇ ಇಲ್ಲ. ಚರಣ್ ಮತ್ತು ನಾವಿಬ್ಬರೂ ಸುದೀರ್ಘ ಕಾಲದಿಂದ ಅತ್ಯುತ್ತಮ ಗೆಳೆಯರಾಗಿದ್ದೇವೆ. ನಾವು ಒಂದೇ ನಟನಾ ಶಾಲೆಯಲ್ಲಿ ಕಲಿತವರು. ಅವರು ಅದ್ಭುತ ನಟನಾಗಿ ಬದಲಾದದ್ದು ನನಗೆ ನಿಜಕ್ಕೂ ಸಂತಸ ತಂದಿದೆ' ಎನ್ನುವ ಮೂಲಕ ಊಹಾಪೋಹಗಳಿಗೆ ಪರದೆ ಎಳೆದಿದ್ದಾರೆ.
'ಚಿರುತ' ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಚರಣ್, ಇತ್ತೀಚಿನ ಅವರ ಚಿತ್ರ 'ಮಗಧೀರ'ದ ಮೂಲಕ ಹೂಂಕರಿಸುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಈ ತೆಲುಗು ಚಿತ್ರದಿಂದಾಗಿ ಕನ್ನಡ ಚಿತ್ರಗಳನ್ನೇ ನೋಡುವವರಿಲ್ಲ ಎಂಬಲ್ಲಿವರೆಗೆ 'ಮಗಧೀರ' ಬೆಂಗಳೂರಿನಲ್ಲಿ ಕಿಚ್ಚು ಹಚ್ಚಿತ್ತು. ಇದನ್ನು ಅಲ್ಪ ಮಟ್ಟಿಗೆ ತಡೆಯಲು ಯಶಸ್ವಿಯಾಗಿರುವುದು ಪುನೀತ್ ರಾಜ್‌ಕುಮಾರ್ ನಾಯಕನಾಗಿರುವ 'ರಾಜ್ - ದಿ ಶೋಮ್ಯಾನ್' ಮಾತ್ರ.
PR
ಇದೇ ವೇಳೆ ಸ್ಯಾಂಡಲ್‌ವುಡ್‌ನ ಈಗಿನ ಬಹುಬೇಡಿಕೆಯ ನಟ ಲೂಸ್ ಮಾದ ಯೋಗೀಶ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಬಗ್ಗೆಯೂ ರಮ್ಯಾ ಮಾತನಾಡಿದ್ದಾರೆ. ಅವರಿಬ್ಬರೂ ಆಕೆಯ ಕಟ್ಟಾ ಅಭಿಮಾನಿಗಳಂತೆ.
ಯೋಗಿ ನನ್ನ ದೊಡ್ಡ ಫ್ಯಾನ್. ಅವರೆದುರು 'ರಾವಣ' ಚಿತ್ರದಲ್ಲಿ ನಟಿಸುವಂತೆಯೂ ಕೇಳಿಕೊಳ್ಳಲಾಗಿತ್ತು. ನನ್ನ 'ಅಮೃತಧಾರೆ'ಯಲ್ಲಿ ಕಾಣಿಸಿಕೊಂಡಿದ್ದ ಗಣೇಶ್ ಕೂಡ ನನ್ನ ಅಭಿಮಾನಿ. ಅವರು ನನ್ನೊಂದಿಗೆ ನಾಯಕನಾಗಿ ನಟಿಸಬೇಕೆಂಬ ಆಸೆಯನ್ನು ತೋಡಿಕೊಂಡಿದ್ದರು. ಗಣೇಶ್ ಜತೆ ನಂತರ 'ಬೊಂಬಾಟ್' ಮಾಡಿದ್ದೆ.
ಆದರೆ ಇತ್ತೀಚೆಗೆ ನಿರ್ದೇಶಕ ವಾಸು ಮಾತನಾಡುತ್ತಾ, ನಾನು ಯೋಗಿಯ ಅಕ್ಕನ ರೀತಿ ಕಾಣುತ್ತೇನೆ ಎಂದಿದ್ದರು. ಆದರೆ ಅದು ಅವರ ಅನಿಸಿಕೆ. ಅದು ಸರಿಯಾದುದಲ್ಲ. ಅಷ್ಟಕ್ಕೂ ನಾನು ಯೋಗಿಗೆ ನಾಯಕಿಯಾಗಲು ಕೇಳಿರಲಿಲ್ಲ. ಕೇಳಿಕೊಂಡು ಹೋಗುವ ವ್ಯಕ್ತಿತ್ವದವಳು ನಾನಲ್ಲ ಎಂದು ರಮ್ಯಾ ಹುಸಿಕೋಪದಿಂದಲೇ ವಾಸುವಿನತ್ತ ರೇಗಿದ್ದಾರೆ.