'ಕೃಷ್ಣನ್ ಲವ್ ಸ್ಟೋರಿ'ಗೆ ಕೊನೆಗೂ ರಾಧೆ ಸಿಕ್ಕಿದ್ದಾಳೆ. ಈ ಹಿಂದೆಯೇ ವೆಬ್ ದುನಿಯಾ ವರದಿ ಮಾಡಿದಂತೆ ಶಶಾಂಕ್ ನಿರ್ದೇಶನದ ಈ ಚಿತ್ರಕ್ಕೆ ರಾಧಿಕಾ ಪಂಡಿತ್ ಆಯ್ಕೆಯಾಗಿದ್ದಾರೆ.
'18ನೇ ಕ್ರಾಸ್' ಚಿತ್ರದಲ್ಲಿ ನಟಿಸಿದ ನಂತರ ಕವಲುದಾರಿಯಲ್ಲಿದ್ದ ರಾಧಿಕಾರಿಗೆ 'ಮೊಗ್ಗಿನ ಮನಸು' ಚಿತ್ರದಲ್ಲಿ ಅವಕಾಶ ಮಾಡಿಕೊಟ್ಟಿದ್ದು ಇದೇ ಶಶಾಂಕ್. ಆ ಚಿತ್ರದಲ್ಲಿ ರಾಧಿಕಾ ಅಭಿನಯ ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದು ಮಾತ್ರವಲ್ಲ, ಫಿಲಂಫೇರ್ ಪ್ರಶಸ್ತಿಯನ್ನು ಕೂಡ ಬಾಚಿಕೊಂಡಿದ್ದರು.
ಇದೀಗ ಅದೇ ರಾಧಿಕಾರನ್ನು ತಮ್ಮ ಹೊಸ ಚಿತ್ರದ ನಾಯಕಿ ಪಟ್ಟಕ್ಕೇರಿಸಿದ್ದಾರೆ ಶಶಾಂಕ್. ಅವರ ಪ್ರತಿಭೆ ಮೇಲಿನ ಭರವಸೆಯಿಂದ ಕತೆ ಕೇಳದೆ ಒಪ್ಪಿಗೆ ಸೂಚಿಸಿದ್ದಾರೆ ರಾಧಿಕಾ. ಚಿತ್ರಕ್ಕೆ ಅಜಯ್ ರಾವ್ ನಾಯಕ. ಉದಯ್ ಮೆಹ್ತಾ ನಿರ್ಮಾಪಕರು. ಉಳಿದಂತೆ ಇತರ ತಂತ್ರಜ್ಞರ ಆಯ್ಕೆ ಇನ್ನು ಆಗಬೇಕಿದೆ.
ರಾಧಿಕಾ ಅಭಿನಯದ 'ಸೂಪರ್ ಮ್ಯಾನ್' ಚಿತ್ರದ ಚಿತ್ರೀಕರಣ ಮತ್ತೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಇಷ್ಟೇ ಅಲ್ಲ, ದಯಾಳ್ ಪದ್ಮನಾಭನ್ ನಿರ್ದೇಶನದ 'ಕದ್ದು-ಮುಚ್ಚಿ'ಯಲ್ಲೂ ರಾಧಿಕಾ ಇದ್ದಾರೆ.
ಅಂತೂ ಪಾತ್ರಗಳ ಆಯ್ಕೆಯಲ್ಲಿ ತುಂಬಾ ಚೂಸಿಯಾಗಿರುವ ರಾಧಿಕಾ, ಗಾಂಧಿನಗರದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲುವ ಸೂಚನೆ ನೀಡುತ್ತಿದ್ದಾರೆ.