ಸಾಮಾನ್ಯವಾಗಿ ಧ್ವನಿಸುರುಳಿ ಕಾರ್ಯಕ್ರಮ ಎಂದರೆ ಅಲ್ಲಿ ಗಣ್ಯಾತಿ ಗಣ್ಯರ ದಂಡೇ ನೆರೆದಿರುತ್ತದೆ. ಗಣ್ಯರಿಂದಲೇ ಧ್ವನಿಸುರುಳಿ ಬಿಡುಗಡೆ ಮಾಡಿಸಿದರೆ ಚಿತ್ರಕ್ಕೆ ತೂಕ ಜಾಸ್ತಿ ಎಂಬುದು ಅವರ ಅಭಿಪ್ರಾಯ. ಆದರೆ ಅವೆಲ್ಲವುದಕ್ಕೂ ಹೊರತಾಗಿ ಸಾಮಾನ್ಯ ಪ್ರೇಕ್ಷಕನೊಬ್ಬನನ್ನು ಕರೆದುಕೊಂಡು ಆಡಿಯೋ ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿದ್ದು ಆರ್ಭಟ ಚಿತ್ರತಂಡ.
ದುಡ್ಡು ಕೊಟ್ಟು ಚಿತ್ರ ನೋಡುವ ಪ್ರೇಕ್ಷಕರೇ ನಮಗೆ ನಿಜವಾದ ದೇವರು. ಆದ್ದರಿಂದಲೇ ಒಬ್ಬ ಸಾಮಾನ್ಯ ಪ್ರೇಕ್ಷಕನಿಂದ ಆಡಿಯೋ ಬಿಡುಗಡೆ ಮಾಡಿಸುತ್ತಿದ್ದೇವೆ ಎಂದು ವಿವರಣೆ ನೀಡಿದರು ನಿರ್ದೇಶಕ ವಿನೋದ್ ಕುಮಾರ್.
ಚಿತ್ರವನ್ನು ದೊ. ಬಸವರಾಜು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಹೊಸ ಮುಖಗಳನ್ನು ತಂದಿದ್ದಾರೆ ನಿರ್ದೇಶಕರು. ರೂಪೇಶ್ ಮತ್ತು ಸೋನು ನಾಯಕ ನಾಯಕಿಯರು. ನಾಯಕಿಯಾಗಿ ಅವಕಾಶ ಸಿಕ್ಕಿರುವುದಕ್ಕೆ ಸಂತಸವಿದೆ. ಈ ಮೂಲಕ ನ್ನ ಪ್ರತಿಭಾ ಅನಾವರಣಕ್ಕೆ ಸಂಪೂರ್ಣ ಅವಕಾಶವಿದ್ದು, ನಿರ್ದೇಶಕರು ತಾಳ್ಮೆಯಿಂದ ಪ್ರತಿಯೊಂದನ್ನು ಹೇಳಿಕೊಟ್ಟರು ಎಂದು ತಿಳಿಸುತ್ತಾರೆ ಸೋನು.
ಚಿತ್ರದ ಹಾಡುಗಳನ್ನು ಲಹರಿ ಆಡಿಯೋ ಹೊರತಂದಿದೆ. ಎ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಬಿ. ಜಗನ್ನಾಥ್ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಚಿತ್ರವನ್ನು ಶೀಘ್ರವೇ ತೆರೆಗೆ ತರಲು ನಿರ್ಧರಿಸಿದ್ದಾರೆ ನಿರ್ದೇಶಕರು.