ಮುಸ್ಸಂಜೆಯ ಗೆಳತಿಯ ವಿವಾದದ ನಡುವೆಯೇ ನಿರ್ದೇಶಕ ಬಿ.ಪಿ. ಶ್ರೀನಿವಾಸ್ ಹರಿಶ್ಚಂದ್ರ ಘಾಟ್ಗೆ ಮುಹೂರ್ತ ನಡೆಸಿದ್ದಾರೆ. ಎರಡು ವರ್ಷಗಳ ಹಿಂದೆಯೇ ಸಿನಿಮಾ ಮಾಡುವುದಾಗಿ ಘೊಷಿಸಿದ್ದ ನಿರ್ಮಾಪಕ ಕಂ ನಿರ್ದೇಶಕರಾದ ಬಿ.ಪಿ. ಶ್ರೀನಿವಾಸ್ ಕಾರಣಾಂತರಗಳಿಂದ ನಿಂತು ಹೋಗಿದ್ದ ಈ ಚಿತ್ರಕ್ಕೆ ಮತ್ತೆ ಜೀವ ಕೊಟ್ಟಿದ್ದಾರೆ.
ದಿ ಲಾಸ್ಟ್ ಸ್ಟಾಪ್ ಎಂಬುದು ಚಿತ್ರದ ಅಡಿಬರಹ. ರುದ್ರಭೂಮಿಯಲ್ಲಿ ಶವಗಳನ್ನು ಸುಡುವ ಮೂಲಕ ಫುಲ್ ಟೈಂ ಕೆಲಸ ಮಾಡುವ ನಾಯಕನಿಗೆ ಮಲ್ಟಿ ಮಿಲಿಯನೇರ್ನ ಮಗಳನ್ನು ಪ್ರೇಮಿಸುವುದು ಪಾರ್ಟ್ ಟೈಂ ಜಾಬ್. ನಾಯಕನಾಗಿ ಗಂಗಾ ಕಾವೇರಿಯ ಅರ್ಜುನ್ ನಟಿಸುತ್ತಿದ್ದಾರೆ. ನಾಯಕಿಯಾಗಿ ನಿರ್ದೇಶಕ ಮಗಳಾದ ಶಾಲಿನಿ ಕಾಣಿಸಿಕೊಳ್ಳುತ್ತಿದ್ದಾರೆ.
ಮಡದಿಯನ್ನು ಕಳೆದುಕೊಂಡ ದುಃಖದಲ್ಲಿಯೇ ರುದ್ರಭೂಮಿಯಲ್ಲಿ ಬದುಕುವ ವಿಶೇಷ ಪಾತ್ರದಲ್ಲಿ ರವಿ ಬೆಳೆಗೆರೆ ನಟಿಸುತ್ತಿದ್ದಾರೆ. ಮುಸ್ಸಂಜೆಯ ಗೆಳತಿಯಲ್ಲಿ ಮಗಳೆದುರು ನಾಯಕರಾಗಿದ್ದ ಶ್ರೀನಿವಾಸ್ ಇಲ್ಲಿ ಅಪ್ಪನ ಪಾತ್ರ ಮಾಡುತ್ತಿದ್ದಾರೆ. ಅವರ ಮಡದಿ ಹಾಗೂ ಕಾರ್ಯಕಾರಿ ನಿರ್ಮಾಪಕಿ ನವನೀತಾ ಶ್ರೀನಿವಾಸ್ ನಾಯಕನ ಅಮ್ಮನಾಗಿ ಬಣ್ಣ ಹಚ್ಚುತ್ತಿದ್ದಾರೆ. ಚಿತ್ರಕ್ಕೆ ಮತ್ತೊಬ್ಬ ನಾಯಕಿ ಸೇರ್ಪಡೆಗೊಳ್ಳುವ ಸುಳಿವನ್ನು ನೀಡಿದ್ದಾರೆ ನಿರ್ದೇಶಕರು.