ಮಿಶ್ರ ಪ್ರತಿಕ್ರಿಯೆ ಕಂಡುಬಂದ ಪ್ರೇಮ್ ನಿರ್ದೇಶನದ ರಾಜ್ ಚಿತ್ರ ಗೆದ್ದಿದೆಯಾ ಎಂದರೆ ಹೌದು ಎನ್ನುತ್ತಾರೆ ನಿರ್ದೇಶಕ ಪ್ರೇಮ್. ರಾಜ್ ಬಿಡುಗಡೆಯಾಗಿ ಕೇವಲ ಒಂದೇ ವಾರದಲ್ಲಿ 31 ಲಕ್ಷ ಮಂದಿ ಈ ಚಿತ್ರವನ್ನು ವೀಕ್ಷಿಸಿದ್ದಾರೆ. 6 ಕೋಟಿ ರೂಪಾಯಿಗಳನ್ನು ಚಿತ್ರ ಗಳಿಸಿದೆ ಎಂದು ಲೆಕ್ಕಾಚಾರದಲ್ಲಿ ಉತ್ತರಿಸುತ್ತಾರೆ ಪ್ರೇಮ್. ಜತೆಗೇ, ಒಂದೇ ವಾರದಲ್ಲಿ 31 ಲಕ್ಷ ಮಂದಿ ವೀಕ್ಷಿಸುವುದೆಂದರೆ ಸುಲಭದ ಮಾತೇ ಎಂದು ಪ್ರಶ್ನಿಸುವ ಪ್ರೇಮ್. ಅಲ್ಲದೆ, ರಾಜ್ ಇಲ್ಲಿ ಇಷ್ಟೊಂದು ಮನ್ನಣೆ ಪಡೆದಿರಬೇಕಾದರೆ ವಿದೇಶದಲ್ಲಿ ನೋಡುವವರೇ ಇಲ್ಲ ಎಂಬ ಕಿರಣ್ ಅವರ ಮಾತನ್ನು ಒಪ್ಪೋದು ಹೇಗೆ ಎಂದು ತಮ್ಮ ವಾದವನ್ನೂ ಮುಂದಿಡುತ್ತಾರೆ.
ಅದೇನೋ ಗೊತ್ತಿಲ್ಲ. ವಿದೇಶದಲ್ಲಿ ಚಿತ್ರ ಬಿಡುಗಡೆ ಮಾಡಲು ಹಕ್ಕು ಖರೀದಿಸಿದ್ದ ಡಾ.ಕಿರಣ್, 11 ಪರದೇಶಗಳಲ್ಲೇಕೆ, ಕೇವಲ ಒಂದೇ ಒಂದು ಪರದೇಶದ ಥಿಯೇಟರ್‌ನಲ್ಲೂ ರಾಜ್ ಚಿತ್ರವನ್ನು ಬಿಡುಗಡೆಗೊಳಿಸಿಲ್ಲ. ಇದಕ್ಕೆ ಕಾರಣ ಕೇಳಿದರೆ ಕಿರಣ್ ಹೇಳಿದ್ದು, ಕರ್ನಾಟಕದ್ಲಲಿ ಮಿಶ್ರ ಪ್ರತಿಕ್ರಿಯೆ ಬಂದ ಮೇಲಂತೂ ವಿದೇಶದ ಯಾವುದೇ ಚಿತ್ರಮಂದಿರವೂ ರಾಜ್ ಚಿತ್ರವನ್ನು ಪ್ರದರ್ಶಿಸಲು ಒಪ್ಪಿಲ್ಲ. ಹೀಗಾಗಿ ನಾನು ವಿದೇಶದಲ್ಲಿ ಚಿತ್ರ ಬಿಡುಗಡೆ ಮಾಡದಿರಲು ನಿರ್ಧರಿಸಿದ್ದೇನೆ ಎನ್ನುತ್ತಾರಂತೆ.
ಇದಕ್ಕೆ ಪ್ರೇಮ್ ತಿರುಗುಬಾಣ ಬಿಟ್ಟಿದ್ದಾರೆ. ಸತ್ಯ ಹೇಳಬೇಕೆಂದರೆ ನನಗೆ ಡಾ.ಕಿರಣ್ ಯಾರೆಂದೇ ಗೊತ್ತಿರಲಿಲ್ಲ. ನನಗೆ ಹಾಗೂ ಪುನೀತ್‌ಗೆ ವಿದೇಶದಲ್ಲಿ ಸಾಕಷ್ಟು ಭಾರತೀಯ ಉದ್ಯಮಿ ಗೆಳೆಯರಿದ್ದಾರೆ. ಅವರೆಲ್ಲ ರಾಜ್ ಚಿತ್ರ ಬಿಡುಗಡೆಯ ಹಕ್ಕಿಗಾಗಿ ಮೊದಲೇ ನಮ್ಮಲ್ಲಿ ಕೇಳಿಕೊಂಡಿದ್ದರು. ಆದರೆ ಈ ಡಾ.ಕಿರಣ್ ನೇರವಾಗಿ ನಿರ್ಮಾಪಕ ಮೂರ್ತಿಯವರನ್ನು ಸಂಪರ್ಕಿಸಿದ್ದಾರೆ. ಹಾಗಾಗಿ ಅವರಿಗೆ ಹಕ್ಕುಗಳನ್ನು ನೀಡಲಾಯ್ತು ಎಂದು ಕೈತೊಳೆದುಕೊಂಡಿದ್ದಾರೆ ಪ್ರೇಮ್.
MOKSHA
ಇಷ್ಟೇ ಅಲ್ಲ, ಡಾ.ಕಿರಣ್ ಅವರು ರಾಜ್ ಚಿತ್ರ ಅತ್ಯಂತ ಕೆಟ್ಟ ಚಿತ್ರ ಎಂದು ಹೇಳಿದ್ದು ನನಗೆ ವಿಪರೀತ ನೋವುಂಟು ಮಾಡಿದೆ. ಕೆಟ್ಟ ಚಿತ್ರವಾಗಿದ್ದರೆ, 31 ಲಕ್ಷ ಮಂದಿ ಯಾಕೆ ನೋಡುತ್ತಿದ್ದರು. ಒಂದು ತಿಂಗಳಲ್ಲಿ ವೀಕ್ಷಿಸುವಷ್ಟು ಮಂದಿ ಕೇವಲ ಒಂದೇ ವಾರದಲ್ಲಿ ನೋಡಿದ್ದು ಹೇಗೆ ಎಂದು ತಾರ್ಕಿಕವಾಗಿ ಪ್ರಶ್ನಿಸುತ್ತಾರೆ.
ಚಿತ್ರ ವೀಕ್ಷಿಸಿದ ಜನರೆಲ್ಲರೂ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಪ್ರೇಕ್ಷಕರಿಗೆ ಸ್ವಲ್ಪ ನಿರಾಶೆಯಾಗಿದೆ ನಿಜ. ಆದರೆ, ಕೆಟ್ಟ ಚಿತ್ರವೆಂದು ಹೇಳಿಲ್ಲ. ಮಾಧ್ಯಮಗಳೂ ಮಿಶ್ರ ಅಭಿಪ್ರಾಯದ ವಿಮರ್ಶೆ ಬರೆದಿವೆ. ಮಾಧ್ಯಮಗಳ ವಿಮರ್ಶೆಯನ್ನೂ ಜನತೆಯ ಅಭಿಪ್ರಾಯವನ್ನೂ ನಾನು ಗೌರವಿಸುತ್ತೇನೆ. ಆದರೆ, ಗಾಂಧಿನಗರದಲ್ಲಿ ಕೂತು ಹಿಂದಿನಿಂದ ಮಸಲತ್ತು ನಡೆಸುವವರನ್ನು ನಾನು ಕೇರ್ ಮಾಡಲ್ಲ ಎಂದು ನೋವಿನಿಂದ ನುಡಿಯುತ್ತಾರೆ ಪ್ರೇಮ್.
ಇರಲಿ, ಹಾಗಾದರೆ, ವಿದೇಶಗಳಲ್ಲಿ ರಾಜ್ ಚಿತ್ರ ಬಿಡುಗಡೆಯಾಗೋದೇ ಇಲ್ವಾ ಎಂದರೆ, 11 ದೇಶಗಳಲ್ಲಿ ರಾಜ್ ಚಿತ್ರ ಬಿಡುಗಡೆಯ ಜವಾಬ್ದಾರಿಯನ್ನು ನಿರ್ಮಾಪಕರೇ ಕೈಗೆತ್ತಿಕೊಂಡಿದ್ದಾರೆ. ಮುಂದಿನ ವಾರ ಚಿತ್ರ ಬಿಡುಗಡೆ ಗ್ಯಾರೆಂಟಿ ಎಂದು ಅಭಯ ನೀಡುತ್ತಾರೆ. ನಿಜವಾಗಿಯೂ ಮುಂದಿನ ವಾರ ಚಿತ್ರ ಬಿಡುಗಡೆಯ ಭಾಗ್ಯ ಕಾಣುತ್ತೋ... ಇಲ್ಲವೋ... ಸತ್ಯವಾಗಿಯೂ ಗೊತ್ತಿಲ್ಲ ಬಿಡಿ.