ವಿಷ್ಣುವರ್ಧನರನ್ನು ಕೆಳಕ್ಕೆ ಕೆಡವಿದ 'ಆಪ್ತರಕ್ಷಕ' ಕುದುರೆ!
MOKSHA
ಆಪ್ತಮಿತ್ರದ ನಂತರ ಇದೀಗ ಆಪ್ತರಕ್ಷಕ ಚಿತ್ರೀಕರಣ ನಡೆಯುತ್ತಿರುವುದು ಎಲ್ಲರಿಗೂ ಗೊತ್ತು. ಈ ಆಪ್ತರಕ್ಷಕ ಚಿತ್ರೀಕರಣದ ವೇಳೆ ಡಾ.ವಿಷ್ಣುವರ್ಧನ್ ಭಾರೀ ಅಪಾಯವಾಗುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರಂತೆ. ಹಾಗಾಗಿ ಆಪ್ತರಕ್ಷಕ ಈಗ ಕೊಂಚ ತಡವಾಗಿದೆ.
ಬೆಂಗಳೂರು ಅರಮನೆ ಮೈದಾನದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಸಾಹಸ ದೃಶ್ಯದ ಶೂಟಿಂಗ್ ಅದಾಗಿತ್ತು. ಕುದುರೆ ಸವಾರಿ ಮಾಡುವ ನಾಯಕನ ಸನ್ನಿವೇಶ. ನೂರಕ್ಕೂ ಹೆಚ್ಚು ಕುದುರೆಗಳನ್ನು ಬಳಸಿ ಶೂಟಿಂಗ್ ಮಾಡಲಾಗುತ್ತಿತ್ತು. ನಂತರ ವಿಷ್ಣುವರ್ಧನ್‌ರಿಗೆ ಒಂದು ಕುದುರೆ ನೀಡಿದರು. ಆದರೆ ವಿಷ್ಣು ಮನಸ್ಸಿನಲ್ಲಿ ಯಾಕೋ ಎಂದೂ ಇಲ್ಲದ ಅಳುಕಿತ್ತು. ಧೈರ್ಯ ಮಾಡಿ ಹತ್ತಿದ್ದೂ ಆಯಿತು, ಆರಂಭದಲ್ಲಿ ಹದವಾಗಿ ಸಾಗಿದ ಕುದುರೆ ಸ್ವಲ್ಪ ದೂರ ಕ್ರಮಿಸಿದಂತೆ ಇದ್ದಕ್ಕಿದ್ದಂತೆ ವೇಗ ಹೆಚ್ಚಿಸಿಯೇ ಬಿಟ್ಟಿತು. ವಿಷ್ಣುವರ್ಧನ್ ಕೈಯಲ್ಲಿ ಅದನ್ನು ಸಂಭಾಳಿಸಲು ಸಾಧ್ಯವೇ ಆಗಲಿಲ್ಲ. ವೇಗ ಹೆಚ್ಚಿಸಿದ ಕುದುರೆ ಇದ್ದಕ್ಕಿದ್ದಂತೆ ತನ್ನೆರಡೂ ಮುಂಗಾಲುಗಳನ್ನು ಎತ್ತಿ ವಿಷ್ಣು ಅವರನ್ನು ನೆಲಕ್ಕುರುಳಿಸಿಯೇ ಬಿಟ್ಟಿತು.
ಆದರೂ ವಿಷ್ಣು ಹೇಳುವಂತೆ, ಅಂತಹ ವಿಶೇಷ ಗಾಯಗಳೇನೂ ಆಗಿಲ್ಲ. ಆದರೆ ಬಿದ್ದು ಆದ ಪೆಟ್ಟಿನಿಂದ ಹಾಸಿಗೆಯಿಂದ ಏಳಲು ಕೆಲವಾರಗಳೇ ಬೇಕಾಯ್ತು. ವೈದ್ಯ ವರದಿಗಳು, ಅದೃಷ್ಟವಶಾತ್ ಬೆನ್ನುಮೂಳೆ ಮುರಿದಿಲ್ಲ. ಆದರೆ ಸರಿಯಾಗಿ ಏಟು ಬಿದ್ದಿದೆ ಎಂದಿವೆ ಎನ್ನುತ್ತಾರೆ.