ಕದ್ದರೂ ಗೊತ್ತಾಗಬಾರದು! ಹೌದು. ಇದು ಕೋಮಲ್ ಪಾಲಿಸಿ. ಚಿತ್ರ ಮಾಡುವಾಗ ಬೇರೆ ಕಡೆಯಿಂದ ಕದ್ದರೂ ಗೊತ್ತಾಗದಂತೆ ಕದಿಯಬೇಕು ಎನ್ನುವುದು ಅವರ ಅಂಬೋಣ. ಅದಕ್ಕಾಗಿ ಕನ್ನಡಕ್ಕೆ ರೀಮೇಕ್ ಮಾಡುವಾಗ, ಕೋಮಲ್ ಮಾತ್ರ ಇಂಗ್ಲಿಷ್ ಚಿತ್ರಗಳ ಹಿಂದೇಕೆ ಹೋಗುತ್ತಾರೆ ಎಂದರೆ ಇದೇ ಕಾರಣ ಎನ್ನುತ್ತಾರೆ ಅವರು.
ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಚಿತ್ರ 50 ದಿನ ಪೂರೈಸಿರುವುದಕ್ಕೆ ಕೋಮಲ್ ಮುಖದಲ್ಲಿ ಮಂದಹಾಸ ಮೂಡಿದೆ. ಹೆಚ್ಚಿನ ಚಿತ್ರಗಳು ವಾರದೊಳಗೆ ಎತ್ತಂಗಡಿಯಾಗುತ್ತಿರುವ ಈ ಸಮಯದಲ್ಲಿ ಈ ಚಿತ್ರ 50 ದಿನ ಪೂರ್ಣಗೊಂಡಿರುವುದು ಸಂತಸ ವ್ಯಕ್ತಪಡಿಸಿದ್ದಾರೆ.
ಆದರೂ ಅವರಿಗೆ ಚಿತ್ರದ ಬಗ್ಗೆ ನೋವಿದೆ. ಅರ್ಜೆಂಟ್ ಆಗಿ ಕತೆ ಮಾಡಬಾರದು ಎಂಬುದನ್ನು ಇದರಿಂದ ಕಲಿತುಕೊಂಡಿದ್ದಾರಂತೆ. ಚಿತ್ರ ಮುಂದಿದೆ. ಆದರೆ ಪ್ರೇಕ್ಷಕ ಹಿಂದೆ ಬಿದ್ದಿದ್ದಾನೆ ಎಂಬುದು ಅವರ ಅಭಿಪ್ರಾಯ. ಚಿತ್ರದಲ್ಲಿನ ಎಷ್ಟೋ ಜೋಕುಗಳು ಪ್ರೇಕ್ಷಕರಿಗೆ ಅರ್ಥನೇ ಆಗಲಿಲ್ಲ. ದೃಶ್ಯಗಳಲ್ಲಿ ಡೈಲಾಗ್ ಪಂಚ್ ಅರ್ಥವಾಗೋ ಮುಂಚೆಯೇ ದೃಶ್ಯ ಮುಗಿದು ಹೋಗುತ್ತಿತ್ತು. ಇವೆಲ್ಲವನ್ನು ಸರಿ ಮಾಡಿಕೊಂಡು ಮುನ್ನಡೆಯಬೇಕು ಎನ್ನುತ್ತಾರೆ ಅವರು.
ಈಗಾಗಲೇ ಸಾಹಿತ್ಯವಲ್ಲದೇ ಕೋಮಲ್ ಬಳಿ ತಾವೇ ಸ್ವಂತ ಮಾಡಿದ ಒಂದಿಷ್ಟು ಕಥೆಗಳಿವೆಯಂತೆ. ಅದೆಲ್ಲಾ ಇದುವರೆಗೂ ಯಾರೂ ಮಾಡದ ಹೊಸ ಹೊಸ ಯೋಚನೆಗಳು ಎನ್ನುತ್ತಾರೆ ಅವರು. ಇವರ ಹೊಸ ಯೋಚನೆಯನ್ನು ಪ್ರೇಕ್ಷಕನಿಗೆ ಯಾವಾಗ ಉಣಬಡಿಸುತ್ತಾರೋ ಕಾದು ನೋಡಬೇಕು.