ರತ್ನಜರ 'ಶೀತಲ' ಸಮರ!
ನಿರ್ದೇಶಕ ರತ್ನಜ ಮತ್ತು ಕ್ಯಾಮೆರಾಮನ್ ಶೀತಲ್ ಜೈನ್ ನಡುವೆ ಶೀತಲ ಸಮರವೇರ್ಪಟ್ಟಿದೆ. ಇದು ನಡೆದಿದ್ದು 'ಪ್ರೇಮಿಸಂ' ಚಿತ್ರದ ಶೂಟಿಂಗ್‌ನಲ್ಲಿ.ಚಿತ್ರದ ಸೆಟ್‌ನಲ್ಲಿ ರತ್ನಜ ಎಲ್ಲರ ಮುಂದೆ ಅವಾಚ್ಯ ಶಬ್ದದಿಂದ ನಿಂದಿಸಿ, ಕ್ಯಾಮೆರಾ ಕೆಲಸ ನಾನೇ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಕಳುಹಿಸಿಕೊಟ್ಟಿದ್ದಾರೆ ಎಂಬ ಸುದ್ದಿ ಬಂದಿದೆ. ಅದಕ್ಕೆ ಕಾರಣವಾದರೂ ಏನು? ಪ್ರೇಮಿಸಂ ಚಿತ್ರದ ಶೂಟಿಂಗ್ ವೇಳೆ ಎಂದಿನಂತೆ ಹೀರೋ ಜೊತೆ ಮಾತಾಡಿಕೊಂಡಿರುವುದನ್ನು ತಪ್ಪಾಗಿ ಗ್ರಹಿಸಿದ ನಿರ್ದೇಶಕರು ಕೆಟ್ಟ ಮಾತುಗಳಿಂದ ನಿಂದಿಸಿದ್ದಾರೆ. ಇಷ್ಟು ಓದಿದರೂ ಸಹದ್ಯೋಗಿ ಜೊತೆ ಹೇಗೆ ವರ್ತಿಸಬೇಕೆಂಬ ಕನಿಷ್ಟ ಸಂಸ್ಕಾರ ಕೂಡ ಇಲ್ಲ ಎಂದು ಆರೋಪಿಸುತ್ತಾರೆ ಶೀತಲ್ ಜೈನ್. ಇಷ್ಟೇ ಅಲ್ಲ. ಶೂಟಿಂಗ್ ಜ್ಞಾನ ಇಲ್ಲದ ಅವರಿಗೆ ಶೂಟಿಂಗ್ ಸ್ಪಾಟ್‌ಗೆ ಬಂದು ಕ್ಯಾಮರಾ ಅಲ್ಲಿಡು, ಇಲ್ಲಿಡು ಎಂದು ಹೇಳುತ್ತಾರೆ. ಕ್ಯಾಮೆರಾಮನ್ ಎಂದರೆ ಒಬ್ಬ ಆಪರೇಟರ್ ಎಂದು ಭಾವಿಸಿದ್ದಾರೆ. ಈಗಾಗಲೇ ಶೇ.80ರಷ್ಟು ಚಿತ್ರೀಕರಣ ಮುಗಿದಿದೆ. ಆದರೆ, ಈಗ ಬೇರೆ ಕ್ಯಾಮೆರಾಮನ್ ಜೊತೆ ಚಿತ್ರೀಕರಣ ಮಾಡುತ್ತಿದ್ದಾರೆ ಎಂದು ರತ್ನಜ ಜೊತೆ ಕೆಲಸ ಮಾಡಿದ ಕಹಿ ಅನುಭವಗಳನ್ನು ಹಂಚಿಕೊಂಡರು ಜೈನ್.ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ರತ್ನಜ ನಿರಾಕರಿಸಿದ್ದಾರೆ. ಈ ಬಗ್ಗೆ ನಿರ್ಮಾಪಕರಲ್ಲಿ ಕೇಳಿ. ನಾನೀಗ ಶೂಟಿಂಗ್‌ನಲ್ಲಿದ್ದೇನೆ ಎನ್ನುತ್ತಾರೆ ಅವರು. ಅಂತೂ ಇವರಿಬ್ಬರ ಜಗಳದ ನಡುವೆಯೂ ಚಿತ್ರದ ಚಿತ್ರೀಕರಣ ಮಾತ್ರ ಯಾವುದೇ ಅಡೆತಡೆಯಿಲ್ಲದೆ ಸಾಗಿದೆಯಂತೆ.